ಸಾರಾಂಶ
ಬೆಂಗಳೂರು : ನಾವು ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಏನೇನು ಆಗಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದರು.
ನಾವು ಸರ್ಕಾರ ಬೀಳಿಸಲು ಹೋಗುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಅಂತಹ ಪ್ರಯತ್ನ ನಾವು ಮಾಡುವುದಿಲ್ಲ ಎಂದರು.ಪಕ್ಷದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತಿದೆ. ಈ ಸರ್ಕಾರ ಉಳಿಯುವುದಿಲ್ಲ, ಒಳಜಗಳದಿಂದ ಪತನಗೊಳ್ಳಲಿದೆ ಎಂಬ ಮಾತನ್ನು ಜನರೇ ಹೇಳುತ್ತಿದ್ದಾರೆ. ನಮ್ಮ ಪ್ರಯತ್ನ ಬೇಕಾಗಿಲ್ಲ ಎಂದು ಹೇಳಿದರು.
ಬರೆದಿಟ್ಟುಕೊಳ್ಳಿ, ತಿಂಗಳಲ್ಲಿ ಶಿಂಧೆ ಮಾಜಿ ಆಗ್ತಾರೆ: ಎಂಬಿಪಾ
ಬೀಳಲಿರುವುದು ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವಲ್ಲ. ಬದಲಿಗೆ ಈ ಲೋಕಸಭಾ ಚುನಾವಣೆ ನಂತರ ಏಕನಾಥ ಶಿಂಧೆ ಅವರ ಮಹಾರಾಷ್ಟ್ರ ಸರ್ಕಾರವೇ ಪತನವಾಗಲಿದೆ ಎಂದು ಬಹೃತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕ ಸರ್ಕಾರ ಉರುಳಿ ಬೀಳಲಿದೆ ಎನ್ನುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಮೊದಲು ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಲಿ. ಬರೆದಿಟ್ಟುಕೊಳ್ಳಿ, ಒಂದು ತಿಂಗಳ ಅವಧಿಯಲ್ಲಿ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ 20 ಶಾಸಕರು ಕಾಂಗ್ರೆಸ್ಸನ್ನು ಸೇರಲಿದ್ದು, ಅವರೆಲ್ಲರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸರ್ಕಾರ ಬೀಳಿಸಲು ಇದು ಮಹಾರಾಷ್ಟ್ರವಲ್ಲ. ಜೂನ್ ಮೊದಲ ವಾರದ ನಂತರ ಶಿಂಧೆ ಅವರ ಸರ್ಕಾರವೇ ಪತನವಾಗಿ, ಅವರೇ ಮಾಜಿ ಆಗಲಿದ್ದಾರೆ. ರಾಜ್ಯದಲ್ಲಿ ನಾವು 136 ಶಾಸಕರಿದ್ದೇವೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ನಮ್ಮ 89 ಶಾಸಕರು ಬಿಜೆಪಿಗೆ ಹೋಗಬೇಕು. ಈಗ ಬೇರೆ ಪಕ್ಷಕ್ಕೆ ಹೋಗುವ ದಡ್ಡರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.ಏಕನಾಥ ಶಿಂಧೆಗೆ ಶಕ್ತಿ ಇದ್ದರೆ ನಮ್ಮ ಐದು ಶಾಸಕರನ್ನು ಮೊದಲು ತಮ್ಮತ್ತ ಸೆಳೆದುಕೊಂಡು ತೋರಿಸಲಿ. ಇನ್ನು ಒಂದೆರಡು ತಿಂಗಳಲ್ಲಿ ಆ ರಾಜ್ಯದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಸರ್ಕಾರ ಬರಲಿದೆ ಎಂದು ಹೇಳಿದರು.
ಲೋಕ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನ: ಸುವರ್ಣ
ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಉರುಳುತ್ತೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆಯನ್ನು ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಸಮರ್ಥಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಉರುಳುವ ಪೂರಕ ವಾತಾವರಣ ಇದೆ, ಇಲ್ಲಿಯೂ ಅದೇ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ಸ್ವತಃ ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರದ ವಿರುದ್ಧ ಬೇಸರಗೊಂಡಿದ್ದಾರೆ ಎಂದರು.
ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಇಲ್ಲದೆ ಶಾಸಕರು ಜನಕ್ಕೆ ಮುಖ ತೋರಿಸದ ಪರಿಸ್ಥಿತಿ ಇದೆ. ಕಾಂಗ್ರೆಸ್ ಶಾಸಕರಿಗೇ ಕ್ಷೇತ್ರದಲ್ಲಿ ಬಹಳ ಮುಜುಗರ ಆಗುತ್ತಿದೆ. ಆದ್ದರಿಂದ ಈ ಸರ್ಕಾರವಿದ್ದರೆ ಗಂಡಾಂತರ ಎಂದು ಎಲ್ಲ ಶಾಸಕರು ಹೇಳುತ್ತಿದ್ದಾರೆ ಎಂದರು.ಜನರಿಗೆ ಅಭಿವೃದ್ಧಿ ಬೇಕು, ಸುಳ್ಳು ಭರವಸೆ ಬೇಡ. ಕೇಂದ್ರದ ಮಾದರಿಯಲ್ಲೇ ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕೆಂದು ಜನ ಬಯಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದಂತೆ ಮುಹೂರ್ತ ನಿಗದಿಯಾಗುತ್ತದೆ. ಡಿಕೆಶಿ ಅವರು ಸಿದ್ಧರಾಮಯ್ಯನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುತ್ತಾರೋ ಅಥವಾ ಸಿದ್ದರಾಮಯ್ಯನವರೇ ಡಿ.ಕೆ.ಶಿವಕುಮಾರ್ ಅವರನ್ನು ಡಿಸಿಎಂ ಹುದ್ದೆಯಿಂದ ಕೆಳಗಿಳಿಸುತ್ತಾರೋ ಎಂಬ ಕುತೂಹಲ ನಮಗೂ ಇದೆ ಎಂದವರು ಹೇಳಿದರು.