ಸಿಎಂ ಸಿದ್ದು ತವರಲ್ಲಿ ಬಿಜೆಪಿ ಅತೃಪ್ತಿಗೆ ಮದ್ದರೆದ ವಿಜಯೇಂದ್ರ

| Published : Mar 29 2024, 12:55 AM IST

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಸಂಚರಿಸಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಸಂಚರಿಸಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಿದ್ದಾರೆ.ಜಿಲ್ಲಾ ಪಂಚಾಯ್ತಿಯ ಬಿಜೆಪಿ ಮಾಜಿ ಸದಸ್ಯ ಸದಾನಂದ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ನಡೆದಿದ್ದ ಆಪರೇಷನ್ ಹಸ್ತವನ್ನು ವಿಫಲಗೊಳಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ವಿಜಯೇಂದ್ರ ಅವರ ಪಾತ್ರ ದೊಡ್ಡದು. ಅದೇ ರೀತಿ ಇನ್ನೂ ಅನೇಕ ಮುಖಂಡರನ್ನು ಮಾತುಕತೆ ಮೂಲಕ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಮನವೊಲಿಸುವಲ್ಲಿ ಯಶಸ್ಸು ಸಾಧಿಸಿದರು.ಒಂದೆಡೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಬಿಕ್ಕಟ್ಟು ಶಮನಗೊಳಿಸುತ್ತಿದ್ದರೆ ಮತ್ತೊಂದೆಡೆ ವಿಜಯೇಂದ್ರ ಅವರೂ ಕಸರತ್ತು ನಡೆಸಿದ್ದಾರೆ.ಮೈಸೂರಿನ ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟು ಮೈಸೂರು ಒಡೆಯರ್ ಸಂಸ್ಥಾನದ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದ್ದರಿಂದ ಸಹಜವಾಗಿಯೇ ಪಕ್ಷದಲ್ಲಿ ತುಸು ಅಸಮಾಧಾನ ಉದ್ಭವಿಸಿತ್ತು. ಜತೆಗೆ ಇದರ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಯತ್ನಿಸಿದ್ದರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿದ್ದರಿಂದ ಅವರಿಗೆ ಇದು ಪ್ರತಿಷ್ಠೆಯ ಕ್ಷೇತ್ರವಾಗಿದೆ.ಆದರೆ, ಇದನ್ನು ಅರಿತ ವಿಜಯೇಂದ್ರ ಅವರು ಎರಡು ದಿನಗಳ ಕಾಲ ಮೈಸೂರಿನಲ್ಲಿ ವಾಸ್ತವ್ಯ ಹೂಡುವ ಮೂಲಕ ಅಲ್ಲಿನ ಪಕ್ಷದ ಸಂಘಟನೆ ಬಲಪಡಿಸಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮುಂದಾಗಿದ್ದು ಬಹುತೇಕ ಯಶಸ್ವಿಯಾಗಿದೆ ಎನ್ನಲಾಗಿದೆ.ಇದೇ ವೇಳೆ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಬಿಜೆಪಿ- ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ವಿಜಯೇಂದ್ರ ಪಾಲ್ಗೊಂಡು ಉಭಯ ಪಕ್ಷಗಳ ನಾಯಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು. ಬಳಿಕ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ಕೋರ್ ಕಮಿಟಿ ಸಭೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯ ಎಚ್.ಡಿ. ಕುಮಾರಸ್ವಾಮಿ ಮತ್ತಿತರ ಮುಖಂಡರೊಂದಿಗೆ ಭಾಗವಹಿಸಿ ಮೈತ್ರಿ ಪಕ್ಷಗಳಲ್ಲಿ ಸಮನ್ವಯತೆ ಮೂಡಿಸುವಲ್ಲಿ ವಿಜಯೇಂದ್ರ ಸಫಲರಾದರು.