ಸಾರಾಂಶ
ರಾಮನಗರ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಬಹುಕೋಟಿ ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೆಲ ಶಾಸಕರನ್ನು ಪೊಲೀಸರು ಕುಂಬಳಗೂಡು ಬಳಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ, ಮೈಸೂರಿನಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಮುನಿರತ್ನ ಸೇರಿದಂತೆ ಮುಖಂಡರು ಬಿಡದಿ-ರಾಮನಗರ ಮಾರ್ಗವಾಗಿ ತೆರಳುತ್ತಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಕಣಿಮಿಣಿಕೆ ಬಳಿಯ ಬೆಂಗಳೂರು - ಮೈಸೂರು ಟೋಲ್ ಪ್ಲಾಜಾ ಬಳಿ ಬೆಳಿಗ್ಗೆ 10.20ರ ವೇಳೆಗೆ ಪೊಲೀಸರು ಎಲ್ಲ ನಾಯಕರನ್ನು ವಶಕ್ಕೆ ಪಡೆದರು.
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ನೇತತ್ವದಲ್ಲಿ ಎಎಸ್ಪಿ , ಡಿವೈಎಸ್ಪಿ ಸಹಿತ ಪೊಲೀಸ್ ಅಕಾರಿಗಳ ತಂಡ ಬೆಂಗಳೂರಿನಿಂದ ಪ್ರತಿಭಟನೆಗೆ ಹೊರಟಿದ್ದ ವಾಹನಗಳನ್ನು ತಡೆದು ನಿಲ್ಲಿಸಿದರು. ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ತಿಮ್ಮೇಶ್ ಗೌಡ ಸೇರಿದಂತೆ ಕೆಲ ಬಿಜೆಪಿ ಮುಖಂಡರನ್ನು ವಶಕ್ಕೆ ತೆಗೆದುಕೊಂಡು ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದರು.
ಬಿಜೆಪಿ ರಾಜ್ಯಾಧ್ಯಕ್ಷರು , ಶಾಸಕರು ಹಾಗೂ ನಾಯಕರನ್ನು 20 ನಿಮಿಷಗಳ ಕಾಲ ಬಿಡದಿ ಪೊಲೀಸ್ ಠಾಣೆಯಲ್ಲಿ ಕೂರಿಸಿ, ನಂತರ ಹೊರ ಕಳುಹಿಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ಠಾಣೆಯ ಮುಂಭಾಗ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಹೋಬಳಿ ಘಟಕದ ಬಿಜೆಪಿ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಕಾರ್ಯದರ್ಶಿ ಸಂದೀಪ್, ಬಾಳೆಮಂಡಿ ಶಿವಣ್ಣ, ಹೊಸೂರು ಮಂಜುನಾಥ್, ಕಷ್ಣ ಮುಂತಾದವರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಠಾಣೆಯಿಂದ ಹೊರಬಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ಧಿಗಾರರೊಂದಿಗೆ ಮಾತನಾಡಿ, ನ್ಯಾಯಯುತ ಹೋರಾಟಕ್ಕೆ ತೆರಳುತ್ತಿದ್ದವರನ್ನು ತಡೆದಿರುವುದು ಖಂಡನೀಯ. ಬಂಧನದ ಮೂಲಕ ತಡೆಯುವುದು ಹತ್ತಿಕ್ಕುವುದರಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ. ವಿಧಾನಸಭಾ ಅವೇಶನದಲ್ಲಿ ಮೈಸೂರು ಮೂಡಾ ನಿವೇಶನ ಹಗರಣದ ಬಗ್ಗೆ ಪ್ರಶ್ನಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಬೆಂ - ಮೈ ಎಕ್ಸ್ ಪ್ರೆಸ್ ವೇನಲ್ಲಿ ಪೊಲೀಸರ ಸರ್ಪಗಾವಲು
ಮುಡಾ ಹಗರಣದ ವಿರುದ್ಧ ಬಿಜೆಪಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಳ್ಳುವದನ್ನು ತಪ್ಪಿಸುವ ಸಲುವಾಗಿ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.
ಕಣಿಮಿಣಿಕೆ ಟೋಲ್ ಪ್ಲಾಜಾ, ಮಂಚನಾಯಕನಹಳ್ಳಿ, ಬಿಡದಿ, ಸಂಗಬಸವನದೊಡ್ಡಿ, ಭೈರಾಪಟ್ಟಣ ಹಾಗೂ ಸರ್ವಿಸ್ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ, ರಾಮನಗರ, ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕುಗಳ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಟ್ ಹಾಕಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು -ಮೈಸೂರಿಗೆ ತೆರಳುತ್ತಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಬಿಜೆಪಿ ಜಿಲ್ಲಾ ಮುಖಂಡರ ಬಂಧನ
ಮೈಸೂರಿನ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಮನಗರದಿಂದ ತೆರಳುತ್ತಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ಮೈಸೂರಿಗೆ ತೆರಳುತ್ತಿದ್ದ ಮುಖಂಡರು ಹಾಗೂ ಕಾರ್ಯಕರ್ತರ ವಾಹನವನ್ನು ನಗರದ ಪೊಲೀಸ್ ಭವನ ಎದುರಿನ ವೃತ್ತದ ಬಳಿ ರಸ್ತೆಗೆ ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದ ಪೊಲೀಸರು ತಡೆದರು.
ವಾಹನದಲ್ಲಿದ್ದ ಮಹಿಳಾ ಮತ್ತು ಪುರುಷ ಕಾರ್ಯಕರ್ತರನ್ನು ಕೆಳಕ್ಕಿಳಿಸಿದ ಪೊಲೀಸರು ಅವರೆಲ್ಲರನ್ನು ಪೊಲೀಸ್ ವಾಹನ ಮತ್ತು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕರೆದೊಯ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ನಗರ ಘಟಕ ಅಧ್ಯಕ್ಷ ದರ್ಶನ್ ರೆಡ್ಡಿ ಸೇರಿದಂತೆ 10ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಖಾಸಗಿ ಕಲ್ಯಾಣ ಮಂಟಪದಲ್ಲಿ ಇರಿಸಿದರು. ಮಧ್ಯಾಹ್ನದ ನಂತರ ಎಲ್ಲರನ್ನು ಬಿಡುಗಡೆ ಮಾಡಿದರು.