ಸಾರಾಂಶ
ಹುಬ್ಬಳ್ಳಿ: ಬಿಜೆಪಿಯಲ್ಲಿ ಭಿನ್ನಮತ ಇರುವುದು ಸತ್ಯ. ಆದಾಗ್ಯೂ ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ವಿಧಾನಸಭೆ ಸಚೇತಕ ದೊಡ್ಡನಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿರುವುದಕ್ಕೆ ಕುಟುಂಬ ರಾಜಕಾರಣ ಎನ್ನುವ ಪ್ರಶ್ನೆ ಬರುವುದಿಲ್ಲ. ವಿಜಯೇಂದ್ರ ವಿವಿಧ ಹುದ್ದೆಗಳನ್ನು ನಿಭಾಯಿಸಿಕೊಂಡು ಮೇಲೆ ಬಂದಿದ್ದಾರೆ. ಯಡಿಯೂರಪ್ಪ ಅವರ ಮಗ ಎನ್ನುವ ಕಾರಣಕ್ಕೆ ಅವರನ್ನು ಬಿಡಬೇಕಾ? ಎಂದು ಪ್ರಶ್ನಿಸಿದರು.ಪಕ್ಷವನ್ನು ಯಾರು ಸದೃಢವಾಗಿ ಮುನ್ನೆಡೆಸಿಕೊಂಡು ಹೋಗುತ್ತಾರೆ ಎನ್ನುವುದು ಮುಖ್ಯ ಎಂದ ಅವರು, ಪಕ್ಷದ ಸಿದ್ಧಾಂತಕ್ಕೆ ಎಲ್ಲರೂ ಬದ್ಧ. ವಿಜಯೇಂದ್ರ ಅವರೇ ಮುಂದುವರಿಯುತ್ತಾರೆ ಎಂದರು.
ಲಿಂಬಾವಳಿ ಹೇಳಿಕೆ ತಪ್ಪು: ಯಡಿಯೂರಪ್ಪ ಕಾಂಗ್ರೆಸ್ ಹೋಗಲು ಮುಂದಾಗಿದ್ದರು ಎಂಬ ಅರವಿಂದ ಲಿಂಬಾವಳಿ ಹೇಳಿಕೆಗೆ ಅಕ್ಷೇಪಿಸಿದ ಅವರು, ಲಿಂಬಾವಳಿ ಹಾಗೆ ಹೇಳಿದ್ದು ತಪ್ಪು. ಜತೆಗೆ ತಪ್ಪು ಹೇಳಿಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ಹೊಸ ಪಕ್ಷ ಕಟ್ಟಿಕೊಂಡು ಹೋಗಿದ್ದರು. ಪಶ್ಚಾತ್ತಾಪವಾಗಿ ಮರಳಿ ಬಂದು ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿದ್ದಾರೆ. ಕಾಂಗ್ರೆಸ್ ಕದ ತಟ್ಟಿದ್ದರೆ ಹೊಸ ಪಕ್ಷ ಕಟ್ಟುತ್ತಿರಲಿಲ್ಲ ಎಂದರು.ನಮ್ಮ ಪಕ್ಷದ ವಿಚಾರವನ್ನು ಹರಿಪ್ರಸಾದ ಮಾತನಾಡದೇ ಅವರ ಪಕ್ಷದಲ್ಲಿ ಏನೇನಾಗುತ್ತಿದೆ ಎಂಬುದನ್ನು ಗಮನಹರಿಸಲಿ. ನಮಗೆ ಯಾರನ್ನು ಮಾಡಬೇಕು ಎಂಬುದು ಗೊತ್ತಿದೆ. ನಿಮ್ಮ ಪಕ್ಷದಲ್ಲಿ ನೀವು ಏನಾಗಿದ್ದೀರಿ ಎಂಬುದು ನೋಡಿ ಎಂದು ತಿರುಗೇಟು ನೀಡಿದರು.
ಪರ್ಸಂಟೇಜ್ ಸರ್ಕಾರ: ನಮ್ಮ ಮೇಲೆ ಶೇ. 40ರಷ್ಟು ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್. ಈಗ ಶೇ. 60-70ರಷ್ಟು ಕಮಿಷನ್ ಪಡೆಯುತ್ತಿದೆ. ಕಮಿಷನ್ ದಂಧೆಯನ್ನಾಗಿ ಮಾಡಿಕೊಂಡಿದೆ ಎಂದು ಟೀಕಿಸಿದರು.ಇವರದು ಬರೀ ಪರ್ಸಂಟೇಜ್ ಸರ್ಕಾರ. ಮಠಕ್ಕೆ ಬಿಡುಗಡೆ ಮಾಡಿದ ಅನುದಾನದಲ್ಲೂ ಸಚಿವ ಶಿವರಾಜ ತಂಗಡಗಿ ಪರ್ಸಂಟೇಜ್ ಕೇಳುತ್ತಿದ್ದಾರೆ. ಇದು ಅತ್ಯಂತ ಅವಮಾನ. ಇನ್ನು ಬಸವರಾಜ ರಾಯರಡ್ಡಿ ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಹೇಳುತ್ತಾರೆ. ಮರುದಿನವೇ ಉಲ್ಟಾ ಹೊಡೆಯುತ್ತಾರೆ. ಬರೀ ಗ್ಯಾರಂಟಿಗಳ ಹೆಸರಲ್ಲೇ ದಿನದೂಡುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಬಸವರಾಜ ಕೆಲಗಾರ, ಭೋಜರಾಜ ಕರೂದಿ, ಎಂ. ನಾಗರಾಜ ಸೇರಿದಂತೆ ಹಲವರಿದ್ದರು.