ಸಾರಾಂಶ
ರಾಮನಗರ : ಹಾಲಿನ ದರವನ್ನು ಹೆಚ್ಚಳ ಮಾಡುವ ರಾಜ್ಯಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿರುವುದು ಖಂಡನೀಯ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎ.ಎಲ್.ಬೈರೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಈ ಕೂಡಲೇ ಹೇಳಿಕೆಯನ್ನು ವಾಪಸ್ಸು ಪಡೆದು, ರೈತರ ನೆರವಿಗೆ ನಿಲ್ಲಬೇಕು. ಇಲ್ಲವಾದರೆ, ರೈತರು ರಾಜ್ಯಾದ್ಯಂತ ಹೋರಾಟ ನಡೆಸಲಿದ್ದಾರೆ ಎಂದರು.
ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ನಿಲ್ಲಿಸಬೇಕು. ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿಯ ಎಲ್ಲಾ ಅಂಗ ಸಂಸ್ಥೆಗಳು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ನಿರ್ಧರಿಸಿದ್ದು, ಇದರಿಂದ ರೈತರ ಸಹಜ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ನಷ್ಟವಾಗಲಿದೆ. ಈ ಕೂಡಲೆ ಇಂತಹ ರೈತ ವಿರೋಧಿ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ನಗರ ಮತ್ತು ಗ್ರಾಮ ಎಂದು ತಾರತಮ್ಯ ಮಾಡದೆ ಸಮಾನ ವಿದ್ಯುತ್ ಸರಬರಾಜು ಮಾಡಬೇಕು. ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಫಸಲು ನಷ್ಟ ಆಧರಿಸಿ ಸರ್ಕಾರ ನಷ್ಟ ಪರಿಹಾರ ಒದಗಿಸಿಕೊಡಬೇಕು. ರಾಮನಗರ ಜಿಲ್ಲೆಯಲ್ಲಿ 15 ಸಾವಿರ ರೈತರ ಬಳಿ ಟಿಸಿ ಅಳವಡಿಕೆ ಸಂಬಂಧ ಹಣ ಪಡೆಯಲಾಗಿದೆ. ಈ ಕೂಡಲೆ ರೈತರಿಗೆ ಟಿಸಿ ಅಳವಡಸಿಕೊಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ನೀಡಲು ಪಡೆಯುತ್ತಿರುವ ದುಬಾರಿ ಹಣವನ್ನು ಕೈಬಿಟ್ಟು ರಿಯಾಯಿತಿ ದರದಲ್ಲಿ ಸಂಪರ್ಕ ದೊರಕಿಸಿಕೊಡಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿ.ಎಂ.ಮಾದೇಗೌಡ, ಉಮೇಶ್. ಲೋಕೇಶ್, ಕುಮಾರ್, ಜಗದೀಶ್ ಇತರರಿದ್ದರು.