ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಶಾಲೆಗಳ ಖೋಖೋ ಪಂದ್ಯಾವಳಿಯಲ್ಲಿ ವಿಜಯಪುರದ ಬಾಲಕ ಮತ್ತು ಬಾಲಕಿಯರ ತಂಡಗಳು ಹಣಾಹಣಿಯ ರೋಚಕತೆಯ ಪ್ರಾಬಲ್ಯ ಮೆರೆದು ರಾಜ್ಯಮಟ್ಟಕ್ಕೆ ಪ್ರವೇಶ ಪಡೆದಿವೆ.ಆಲಮಟ್ಟಿ ಡ್ಯಾಂ ಸೈಟ್‌ನ ಸರ್ಕಾರಿ ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಬೆಳಗಾವಿ ವಿಭಾಗಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಯ ಬಾಲಕ ಹಾಗೂ ಬಾಲಕಿಯರ ಪ್ರಾಥಮಿಕ ಶಾಲೆ ಉಭಯ ತಂಡಗಳು (14 ವರ್ಷದೊಳಗಿನ) ಖೋಖೋ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡವು.
ತೀವ್ರ ಕುತೂಹಲ ಕೆರಳಿಸಿದ್ದ ಬಾಲಕರ ಫೈನಲ್ ಪಂದ್ಯ ತುರುಸಿನ ಆಟಕ್ಕೆ ಸಾಕ್ಷಿಯಾಗಿತ್ತು. ಅಂತಿಮ ಕ್ಷಣದವರೆಗೂ ಗೆಲವಿಗಾಗಿ ಅಂಕಣದಲ್ಲಿ ಉಭಯ ತಂಡಗಳು ಭಾರೀ ಸೆಣಸಾಟ ನಡೆಸಬೇಕಾಯಿತು. ಆದರೆ ಪಂದ್ಯದ ಆರಂಭದಿಂದಲೂ ಕೊನೆಯವರೆಗೂ ಬಿಗಿ ಹಿಡಿತ ಸಾಧಿಸಿದ ವಿಜಯಪುರ ತಂಡ 10 ಅಂಕ ಗಳಿಸಿತು. ಪ್ರತಿ ಹಂತದಲ್ಲೂ ವಿಜಯಪುರ ತಂಡ ಮೇಲುಗೈ ಸಾಧಿಸಿದ ಪರಿಣಾಮ ಎದುರಾಳಿ ಬೆಳಗಾವಿ ತಂಡವು 7 ಅಂಕಕ್ಕೆ ಸೀಮಿತಗೊಂಡಿತು. ಹೀಗಾಗಿ ಮೂರು ಅಂಕಗಳ ಅಂತರದಿಂದ ಸೋಲುಂಡು ರನ್ನರ್ ಅಪ್ ಆಯಿತು.ವಿಜಯಪುರ ತಂಡದ ಲವ ಮಾದರ ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾದರು. ಇದೇ ತಂಡದ ರುದ್ರಗೌಡ ಬಿರಾದಾರ ಉತ್ತಮ ರನ್ನರ್ ಹಾಗೂ ಬೆಳಗಾವಿಯ ಹೊನ್ನಪ್ಪ ತರಾಟೆ ಬೆಸ್ಟ್ ಚೇಸರ್ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು.
ಬಾಲಕಿಯರ ತಂಡ:ಬಾಲಕಿಯರ ಅಂತಿಮ ಸ್ಪರ್ಧೆ ಏಕಪಕ್ಷಿಯವಾಯಿತು. ವಿಜಯಪುರ ತಂಡ ಸಾಂಘಿಕ ಹೋರಾಟ ಉಳ್ಳ ಆಟ ಪ್ರದರ್ಶಿಸಿ 16 ಅಂಕ ಪಡೆದು ನಿರಾಸಯವಾಗಿ ಗೆಲವು ಸಾಧಿಸಿತು. ಎದುರಾಳಿ ಬೆಳಗಾವಿ ತಂಡ 8 ಅಂಕ ಪಡೆಯಿತು. ಹೀಗಾಗಿ ವಿಜಯಪುರ 8 ಅಂಕಗಳ ಲೀಡ್‌ನಿಂದ ವಿಜಯ ಸಾಧಿಸಿ, ವಿಜಯಪತಾಕೆ ಹಾರಿಸಿತು. ಆರಂಭದಿಂದಲೂ ಪಂದ್ಯದ ಮೇಲೆ ಹತೋಟಿ ಸಾಧಿಸಿದ ವಿಜಯಪುರ ಬಾಲಕಿಯರು, ಸಾಂಘಿಕ ಹೋರಾಟದ ಮೂಲಕ ಅಂತಿಮವಾಗಿ ಜಯಮಾಲೆಯನ್ನು ತಮ್ಮದಾಗಿಸಿಕೊಂಡರು.
ಮೊದಲ ಇನ್ನಿಂಗ್ಸ್‌ನಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ವಿಜಯಪುರ ತಂಡದ ಸುಮಂಗಲಾ ಮಂಗಳಗುಡ್ಡ ಬೆಸ್ಟ್ ರನ್ನರ್ ಪ್ರಶಸ್ತಿಗೆ ಭಾಜನರಾದರು. ಇದೇ ತಂಡದ ಸಂಜನಾ ವಡವಡಗಿ ಬೆಸ್ಟ್ ಚೇಸರ್ ಪ್ರಶಸ್ತಿಗೆ ಪಾತ್ರರಾದರು. ಬೆಳಗಾವಿಯ ನಿಂಗಮ್ಮ ಉತ್ತಮ ಆಲ್ರೌಂಡರ್ ಪ್ರಶಸ್ತಿ ಪಡೆದುಕೊಂಡರು.ನಿಡಗುಂದಿಯ ಮಣಗೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿದ್ದ ವಿಜಯಪುರ ಬಾಲಕರ ತಂಡ ಹಾಗೂ ಸಮೀಪದ ಬೇನಾಳ ಆರ್.ಎಸ್. ಶಾಲೆಯ ವಿದ್ಯಾರ್ಥಿನಿಯರಿದ್ದ ಬಾಲಕಿಯರ ತಂಡ ಬಹುತೇಕ ಸ್ಥಳೀಯರೇ ಆಗಿದ್ದರಿಂದ ಸಹಸ್ರಾರು ಕ್ರೀಡಾಭಿಮಾನಿಗಳು ಬೆಳಗ್ಗೆಯಿಂದಲೇ ಮೈದಾನದಲ್ಲಿದ್ದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
270 ಕ್ರೀಡಾಪಟುಗಳಿಗೆ ಸನ್ಮಾನ:ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರತಿ ಆಟಗಾರ, ಕೋಚ್ ಸೇರಿ ಒಟ್ಟಾರೆ 270 ಜನ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಮೈದಾನದಲ್ಲಿಯೇ ಪ್ರತಿ ಪಂದ್ಯದ ಪ್ರತಿ ಇನ್ನಿಂಗ್ಸ್ ಮುಗಿದ ತಕ್ಷಣ ಕ್ರೀಡಾಪಟುಗಳಿಗೆ ಕುಡಿಯುವ ನೀರು, ಮಜ್ಜಿಗೆ ಹಾಗೂ ಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಪ್ರತಿಯೊಬ್ಬರಿಗೆ ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕ್ರೀಡಾಕೂಟ ಉದ್ಘಾಟನೆ:ಮಂಗಳವಾರ ಬೆಳಗ್ಗೆ 7ಕ್ಕೆ ಕ್ರೀಡಾಕೂಟಕ್ಕೆ ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಆರ್‌ಎಫ್‌ಒ ಮಹೇಶ ಪಾಟೀಲ, ಕ್ರೀಡಾಕೂಟದ ಸಂಘಟಕ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನುಗ್ಗಲಿ, ನೌಕರರ ಸಂಘದ ಅಧ್ಯಕ್ಷ ಎಸ್.ಬಿ.ದಳವಾಯಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ.ಎಸ್.ಲಾಳಶೇರಿ, ತಾಲೂಕು ದೈ.ಶಿ.ಪರೀವಿಕ್ಷಕರು ಎಸ್.ಎಸ್.ಅವಟಿ, ವಿಜಯಪುರ ನಗರ ತಾಲೂಕಾ ದೈ.ಶಿ.ಪರೀವಿಕ್ಷಕರು ಎಸ್.ಜೆ.ಬಿರಾದಾರ, ತಾಲೂಕಾ ದೈ.ಶಿ.ಪರೀವಿಕ್ಷಕರು ಎಚ್.ಜೆ.ಮಾಳಗೊಂಡ, ಜಿಲ್ಲಾ ದೈ.ಶಿ.ಶಿಕ್ಷಕರ ಅಧ್ಯಕ್ಷರು ಬಿ.ಎಂ.ಪಾಟೀಲ, ಎನ್.ಬಿ.ದಾಸರ, ಸುರೇಶ ಆಲೂರ, ಮೆರೆಕೂರ ಮತ್ತಿತರರು ಇದ್ದರು.
ಪ್ರಶಸ್ತಿ ವಿತರಣೆ:ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಸಂಘಟಕ ಚಂದ್ರಶೇಖರ ನುಗ್ಗಲಿ ಮಾತನಾಡಿ, ಕ್ರೀಡಾಕೂಟ ಆಯೋಜಿಸಿದ ಬಗೆಗೆ ಶ್ಲಾಘಿಸಿದರು. ಈ ವೇಳೆ ಎ.ಎಸ್. ಲಾಳಶೇರಿ, ಎಸ್.ಎಂ. ಪಾಟೀಲ, ವಿಜಯಕುಮಾರ ದೇಸಾಯಿ, ಅಶೋಕ ಬೂದಿಹಾಳ, ಎಂ.ಎಸ್. ಮುಕಾರ್ತಿಹಾಳ, ಎಸ್.ಎಚ್. ಬಿರಾದಾರ, ಶಂಕರ ಚವ್ಹಾಣ, ಪರಶುರಾಮ ಪಮ್ಮಾರ, ಎಸ್.ಎನ್. ಮಿಣಜಗಿ, ಎಚ್.ಎಂ.ಬಲವಾಡ, ಎಸ್.ಎಂ.ಪಾಟೀಲ, ಎಂ.ಆರ್.ಮಕಾನದಾರ, ಎಂ.ಎಂ.ಮುಲ್ಲಾ, ಸಲೀಂ ದಡೆದ, ಎಂ.ಬಿ. ಬಿರಾದಾರ, ಆರ್.ಬಿ. ಗೌಡರ. ವಿ.ಕೆ. ಮಸೂತಿ, ಆರ್.ಜಿ.ಬುಲಾತಿ ಮತ್ತಿತರರಿದ್ದರು. ಬಸವರಾಜ ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.