ಮಲೆಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ಸಂಕ್ರಾಂತಿ ಆಚರಣೆ

| Published : Jan 17 2024, 01:47 AM IST

ಸಾರಾಂಶ

ಹನೂರುಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಕ್ರಾಂತಿ ಪ್ರಯುಕ್ತ ಸಾಲೂರು ಬೃಹನ್ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಜಾನುವಾರಗಳಿಗೆ ಕಿಚ್ಚು ಹಾಯಿಸುವ ಮೂಲಕ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಕ್ರಾಂತಿ ಪ್ರಯುಕ್ತ ಸಾಲೂರು ಬೃಹನ್ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಜಾನುವಾರಗಳಿಗೆ ಕಿಚ್ಚು ಹಾಯಿಸುವ ಮೂಲಕ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಸಂಜೆ ಸಾಲೂರು ಬೃಹನ್ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಲೆ ಮಹದೇಶ್ವರನಿಗೆ, ದೇವಾಲಯದ ಮುಂಭಾಗವಿರುವ ಬಸವ ವಾಹನಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ, ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಭಕ್ತರ ಸಮ್ಮುಖದಲ್ಲಿ ಕಿಚ್ಚುಹಾಯಿಸುವ ಮೂಲಕ ಮಹಾ ಸಂಕ್ರಾಂತಿಯ ಪೂಜಾ ಕಾರ್ಯಕ್ರಮಗಳು ನಡೆಯಿತು. ಮಹದೇಶ್ವರ ಬೆಟ್ಟದ ದೇವಾಲಯದ ಮುಂಭಾಗ ನಡೆಯುವ ಜಾನುವಾರುಗಳ ಕಿಚ್ಚುಹಾಯಿಸುವ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ರೈತರು ಸಹ ಉತ್ಸಾಹದಿಂದ ಭಾಗವಹಿಸಿ ಜಾನುವಾರುಗಳಿಗೆ ರೋಗರುಜಿನಗಳು ಬರದಂತೆ ತಡೆಗಟ್ಟುವಂತೆ ಮಲೆ ಮಾದೇಶ್ವರನಲ್ಲಿ ನಿವೇದನೆ ಮಾಡಿಕೊಂಡರು.ಆಲಂಬಾಡಿ ಬಸವನಿಗೆ ಪೂಜೆ ಮಲೆ ಮಹದೇಶ್ವರ ಬೆಟ್ಟದ ಆಲಂಬಡಿ ಬಸವೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಹಾಲಾಭಿಷೇಕ ಹಾಗೂ ದೂಪದ ಅಭಿಷೇಕ ಮಾಡುವ ಮೂಲಕ, ರೈತರು ಬೆಳೆದ ದವಸ ಧಾನ್ಯಗಳನ್ನು ತಂದು ದೇವರಿಗೆ ಅರ್ಪಿಸುವ ಮೂಲಕ ಆಲಂಬಾಡಿ ಬಸವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.