ವಿಕಾಸಪರ್ವ ಚಿತ್ರ ರಾಜ್ಯಾದ್ಯಂತ ಬಿಡುಗಡೆ

| Published : Sep 12 2024, 01:45 AM IST

ಸಾರಾಂಶ

ವಿಕಾಸಪರ್ವ ಸಿನಿಮಾ ತುಂಬಾ ಸೂಕ್ಷ್ಮ ವಿಷಯ ಆಧಾರಿತ ಸಿನಿಮಾವಾಗಿದೆ. ಸಿನಿಮಾ ನೋಡಿದವರು ಇದು ನನ್ನ ಜೀವನದ ಕಥೆಯನ್ನ ಸಿನಿಮಾ ಮಾಡಿ ತೆರೆಯ ಮೇಲೆ ಬರುತ್ತಿದೆ ಎಂಬಂತೆ ಭಾವಿಸುತ್ತಾರೆ. ಸಿನಿಮಾದಲ್ಲಿ ಎಲ್ಲಿಯೂ ಅಬ್ಬರ ಇಲ್ಲ, ಮೂರು ಹಾಡುಗಳು, ಎರಡು ಫೈಟ್ ಗಳು ಇವೆ. ಸಕಲೇಶಪುರ ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಜನರು ಸಿನಿಮಾ ನೋಡಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ಎಂದು ನಾಯಕ ನಟ ರೋಹಿತ್ ನಾಗೇಶ್

ಕನ್ನಡಪ್ರಭ ವಾರ್ತೆ ಹಾಸನ

ಸಕಲೇಶಪುರ ತಾಲೂಕಿನ ಹೆಗ್ಗೋವೆಯ ನಟ ರೋಹಿತ್ ನಾಗೇಶ್ ಹಾಗೂ ಸ್ವಾತಿ ನಟಿಸಿರುವ ವಿಕಾಸಪರ್ವ ಚಿತ್ರವು ಸೆಪ್ಟಂಬರ್ ೧೩ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಹಾಸನದ ಪಿಕ್ಚರ್ ಪ್ಯಾಲೆಸ್ ಹಾಗೂ ಸಕಲೇಶಪುರದಲ್ಲಿ ತೇಜಸ್ವಿ ಸಿನಿಮಾ ಮಂದಿರದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ಪತ್ರಕರ್ತರು ಹಾಗೂ ಕೆ. ಹೊಸಕೋಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ. ಹರೀಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ೨೨ ವರ್ಷಗಳಿಂದ ಕನ್ನಡ, ತೆಲುಗು ಸೇರಿದಂತೆ ೩೫ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಅನೇಕ ಧಾರವಾಹಿಗಳಲ್ಲಿ ಬಣ್ಣ ಹಚ್ಚಿರುವ ರೋಹಿತ್ ನಾಗೇಶ್ ಅವರು ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ವಿಕಾಸಪರ್ವ ಸಿನಿಮಾ ರಾಜ್ಯದೆಲ್ಲೆಡೆ ಇದೇ ಸೆಪ್ಟಂಬರ್೧೩ರಂದು ಚಿತ್ರಮಂದಿರಗಳಲಿ ಪ್ರದರ್ಶನಗೊಳ್ಳಲಿದೆ. ಉತ್ತಮ ಸಂದೇಶವನ್ನು ಅಳವಡಿಸಿ ನಿರ್ಮಿಸಿರುವ ವಿಕಾಸಪರ್ವ ಸಿನಿಮಾವನ್ನು ಕುಟುಂಬ ಸಮೇತರಾಗಿ ಚಿಂತ್ರಮಂದಿರಕ್ಕೆ ಬಂದು ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ನಾಯಕ ನಟ ರೋಹಿತ್ ನಾಗೇಶ್ ಮಾತನಾಡಿ, ವಿಕಾಸಪರ್ವ ಸಿನಿಮಾ ತುಂಬಾ ಸೂಕ್ಷ್ಮ ವಿಷಯ ಆಧಾರಿತ ಸಿನಿಮಾವಾಗಿದೆ. ಸಿನಿಮಾ ನೋಡಿದವರು ಇದು ನನ್ನ ಜೀವನದ ಕಥೆಯನ್ನ ಸಿನಿಮಾ ಮಾಡಿ ತೆರೆಯ ಮೇಲೆ ಬರುತ್ತಿದೆ ಎಂಬಂತೆ ಭಾವಿಸುತ್ತಾರೆ. ಸಿನಿಮಾದಲ್ಲಿ ಎಲ್ಲಿಯೂ ಅಬ್ಬರ ಇಲ್ಲ, ಮೂರು ಹಾಡುಗಳು, ಎರಡು ಫೈಟ್ ಗಳು ಇವೆ. ಸಕಲೇಶಪುರ ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಜನರು ಸಿನಿಮಾ ನೋಡಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನವೀನ್ ಸುವರ್ಣ ಕ್ಯಾಮರಾ ವರ್ಕ್‌ ನಿರ್ವಹಿಸಿದ್ದಾರೆ. ವಿಶೃತ್ ನಾಯಕ್ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿರುವ ಈ ಚಿತ್ರಕ್ಕೆ ಅನ್ಬು ಅರಸ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಎಲ್ಲ ರೀತಿಯ ಅಂಶಗಳೂ ಇವೆ. ಸಮಾಜದ ಪ್ರತಿಯೊಂದು ಮನೆಯಲ್ಲೂ ನಡೆಯುವ ಸಮಸ್ಯೆಯೊಂದನ್ನು ನಮ್ಮ ಚಿತ್ರದಲ್ಲಿ ಹೇಳಿದ್ದೇವೆ. ಅದೇನೆಂದು ನೀವು ಚಿತ್ರಮಂದಿರದಲ್ಲೇ ನೋಡಬೇಕು. ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಈಗಾಗಲೇ ನೋಡುಗರ ಮನ ಗೆದ್ದಿದೆ ಎಂದು ಹೇಳಿದರು. ನಾಯಕ ನಟಿ ಸ್ವಾತಿ ಮಾತನಾಡಿ, ಚಿತ್ರದಲ್ಲಿ ನಾನು ಗೃಹಿಣಿಯ ಪಾತ್ರ ನಿರ್ವಹಿಸಿದ್ದು, ಮಹಿಳೆ ಸಂಸಾರದಲ್ಲಿ ಹೇಗೆಲ್ಲ ಇರಬೇಕು ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ. ಕುಟುಂಬ ಸಮೇತರಾಗಿ ನೋಡಲೇಬೇಕಾದ ಸಿನಿಮಾ ಇದಾಗಿದ್ದು, ಜಿಲ್ಲೆಯ ಜನರು ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿ ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಮೋಹನ್ , ಜನಪರ ಹೋರಾಟಗಾರ ರಾಜೇಶ್ ಗೌಡ, ಸಮಾಜ ಸೇವಕಿ ರತಿ ಸೇರಿದಂತೆ ಇತರರು ಇದ್ದರು.