ವಿಕಸಿತ ಭಾರತ: ಕಾಂಗ್ರೆಸ್- ಬಿಜೆಪಿ ಮಧ್ಯೆ ವಾಗ್ವಾದ

| Published : Jan 19 2024, 01:46 AM IST

ಸಾರಾಂಶ

ಸಿದ್ದರಾಮಯ್ಯ ಅವರು ಬಡವರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಂತಹ ಮುಖ್ಯಮಂತ್ರಿ ಭಾವಚಿತ್ರ ಬಳಸಬೇಕು ಎಂದ ವೇಳೆ ಸಂಸದ ರಾಘವೇಂದ್ರ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹರಿಹಾಯ್ದಿದ್ದಾರೆ ಎಂದು ‘ಕೈ’ಪಡೆ ಆರೋಪಿಸಿದೆ.

- ಕೆನರಾ ಬ್ಯಾಂಕ್ ಪ್ರಯೋಜಕತ್ವದ ಕಾರ್ಯಕ್ರಮ । ವಾಹನದ ಮೇಲೆ ಸಿಎಂ ಸಿದ್ದು ಭಾವಚಿತ್ರ ಬಳಸಲು ಕೈಪಡೆ ಆಗ್ರಹ

ಕನ್ನಡಪ್ರಭ ವಾರ್ತೆ ಆನವಟ್ಟಿವಿಕಸಿತ ಭಾರತ ಕಾರ್ಯಕ್ರಮ ಆಯೋಜಕರಾದ ಕೆನರಾ ಬ್ಯಾಂಕ್‌ನವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕದೆ ಅವಮಾನಿಸಿದ್ದಾರೆ. ಅವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿ ಮಲ್ಲಿಕಾರ್ಜುನ ವೃತ್ತದಲ್ಲಿ ಬುಧವಾರ ಕೆನರಾ ಬ್ಯಾಂಕ್ ಪ್ರಯೋಜಕತ್ವದಲ್ಲಿ ಕೇಂದ್ರ ಸರ್ಕಾರದ ವಿಕಸಿತ ಭಾರತ ಕಾರ್ಯಕ್ರಮ ನಡೆಯುತ್ತಿತ್ತು, ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಮೋದಿ ಭಾವಚಿತ್ರ ಮಾತ್ರ ಹಾಕಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಏಕೆ ಹಾಕಿಲ್ಲ ? ಎಂದು ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಯಿತು.

ಸಿದ್ದರಾಮಯ್ಯ ಅವರು ಬಡವರಿಗೆ ಅನ್ನಭಾಗ್ಯ, ಗೃಹಲಕ್ಮೀ, ಶಕ್ತಿ, ಯುವನಿಧಿ ಅಂತಹ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಅಂತಹ ಮುಖ್ಯಮಂತ್ರಿ ಪೋಟೋ ಏಕೆ ಹಾಕಿಲ್ಲ ಎಂದು ಸಂಸದ ರಾಘವೇಂದ್ರ ಅವರನ್ನು ಕೇಳಿದರೆ ಕಾಂಗ್ರೆಸ್‌ನವರು ಏಕೆ ಇಲ್ಲಿ ಬಂದಿದೀರಿ, ಗೂಂಡಾಗಿರಿ ಮಾಡುತ್ತೀರಾ? ಎಂದು ನಮ್ಮನ್ನು ಅವಮಾನಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಕೂಡಲೇ ಕ್ಷಮೆ ಕೇಳಬೇಕು ಒಬ್ಬ ಜನಪ್ರತಿನಿಧಿಯಾಗಿ ಇಂತಹ ಮಾತುಗಳು ಅವರ ಬಾಯಿಯಿಂದ ಬರಬಾರದಿತ್ತು ಎಂದು ಕಾಂಗ್ರೆಸ್‌ ಮುಖಂಡರು ಅಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ಯುವನಿಧಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ, ಶಾಸಕರನ್ನು ಸಿದ್ದರಾಮಯ್ಯ ಗೌರವಿಸಿದ್ದಾರೆ. ಅಂತಹ ಮುಖ್ಯಮಂತ್ರಿ ಅವರ ಭಾವಚಿತ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಹೇಳಿದೇ ಇರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಧರ್ಮನಾಯ್ಕ, ಹನುಮಂತಪ್ಪ, ಹಬಿಬುಲ್ಲಾ ಹವಾಲ್ದಾರ್, ಎಲ್.ಜಿ ಮಾಲ ತೇಶ್, ಸುರೇಶ್ ಹಾವಣ್ಣನವರ್, ಸಂಜೀವ, ಪ್ರಭು, ಮುಸ್ತಾಕ್ ಅಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕೆನರಾ ಬ್ಯಾಂಕ್‌ ಯೋಜನೆಗಳನ್ನು ಮಾತ್ರ ಸಂಸದರು ಜನರಿಗೆ ಹೇಳಬೇಕಾಗಿತ್ತು. ಅದನ್ನು ಬಿಟ್ಟು ವೈಯಕ್ತಿಕ ಅನುದಾನಗಳನ್ನು ಹೇಳಿಕೊಂಡಿದ್ದಾರೆ. ಇದು ಸಾರ್ವಜನಿಕರ ಕಾರ್ಯಕ್ರಮವಾಗಿದ್ದು, ಕೆಲವೇ ಬಿಜೆಪಿ ಕಾರ್ಯಕರ್ತರು ಇದ್ದರು. ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಆಯೋಜಕರನ್ನು ವಿಚಾರಿಸಿದ್ದಾಗ ವಾಗ್ವಾದಕ್ಕೆ ಇಳಿದರು ಎಂದು ಕಾಂಗ್ರೆಸ್‌ ಮುಖಂಡ ಸಜೀವ ತರಕಾರಿ ತಿಳಿಸಿದರು.ಇದು ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ಹೇಳುವ ಕಾರ್ಯಕ್ರಮ, ವಿಕಸಿತ ಭಾರತ ವಾಹನದ ಮೇಲೆ ಸಂಸದ ರಾಘವೇಂದ್ರ ಸೇರಿದಂತೆ ಯಾರ ಭಾವಚಿತ್ರವೂ ಇಲ್ಲ. ದೇಶದ ತುಂಬ ಕೆನರಾ ಬ್ಯಾಂಕ್ ಪ್ರಯೋಜಕತ್ವ ವಹಿಸಿದೆ ಎಂದು ಬಿಜೆಪಿ ಮುಖಂಡರಾದ ಕೋಟ್ರೇಶ್, ರಾಜು, ಕೆರಿಯಪ್ಪ ಮುತಾಂದವರು ಪ್ರತಿಕ್ರಿಯೆ ನೀಡಿದರು.

ಇಲ್ಲಿನ ಆಯೋಜಕರಾದ ಕೆನರಾ ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಸುವವರೆಗೂ ಸ್ಥಳ ಬಿಟ್ಟು ಹೋಗುವುದಿಲ್ಲ. ಧರಣಿ ನಡೆಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದರು. ಪಿಎಸ್‌ಐ ರಾಜು ರೆಡ್ಡಿ ಅವರು ಆಯೋಜಕರನ್ನು ಠಾಣೆಗೆ ಕರೆಸುತ್ತೇವೆ. ಸಾರ್ವಜನಿಕರಿಗೆ ತೊಂದರೆ ನೀಡುವುದು ಬೇಡ, ಠಾಣೆಯಲ್ಲಿ ಕುಳಿತು ಈ ವಿಚಾರದ ಬಗ್ಗೆ ತಿಳಿದುಕೋಳ್ಳವುದು ಸೂಕ್ತ ಎಂದು ಮನವೊಲಿಸಿದರು.