ಸಾರಾಂಶ
2047 ಹೊತ್ತಿಗೆ ಭಾರತವನ್ನು ಶಕ್ತಿಶಾಲಿಯಾಗಿಸುವ ಕನಸು: ಬಿಜೆಪಿ ರಾಜ್ಯಾಧ್ಯಕ್ಷ
ಕನ್ನಡಪ್ರಭ ವಾರ್ತೆ ಕೆ.ಆರ್.ಪುರಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದ್ದ ಜನಪರ ಯೋಜನೆಗಳನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದರು.
ಕೆ.ಆರ್. ಪುರ ಕ್ಷೇತ್ರದ ಬಿಬಿಎಂಪಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೇಂದ್ರ ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಜವಾಬ್ದಾರಿ ಅರಿತು ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಬೇಕು ಎಂದರು.
ಭಾರತವನ್ನು 2047 ಹೊತ್ತಿಗೆ ವಿಶ್ವದಲ್ಲೇ ಶಕ್ತಿಶಾಲಿ ರಾಷ್ಟ್ರವಾಗಿ ನಿರ್ಮಾಣ ಮಾಡುವ ಕನಸು ಕಂಡಿರುವ ಪ್ರಧಾನಿ ಮೋದಿ ಅವರು, ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲು ಕಳೆದ ಒಂಬತ್ತು ವರ್ಷದಿಂದ ಒಂದು ದಿನ ರಜೆ ತೆಗೆದುಕೊಳ್ಳದೆ, ತಪಸ್ಸಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕನಸು ಸಾಕಾರವಾಗಬೇಕಾದರೆ ನಾವೆಲ್ಲರೂ ಮೋದಿಯವರ ಕೈಬಲಪಡಿಸಲು, ಮತ್ತೊಂದು ಅವಧಿಗೆ ಮೋದಿ ಪ್ರಧಾನಿಯಾಗಿ ಕಾಣಲು ಶ್ರಮಿಸಬೇಕು ಎಂದು ತಿಳಿಸಿದರು.ಸದಾ ಬಡವರ ಪರವಾಗಿ ಕೆಲಸ ಮಾಡುತ್ತಿರುವ ಮೋದಿ ಅನೇಕ ಜನಪರ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಜನಧನ್ ಖಾತೆ, ಆಯುಷ್ಮಾನ್ ಭಾರತ, ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಉಜ್ವಲ ಯೋಜನೆ ಸೇರಿ ಅನೇಕ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಉದ್ಯೋಗ ಕೊಡುವುದು ಅಲ್ಲ, ಉದ್ಯೋಗ ಸೃಷ್ಟಿ ಮಾಡೋದು ಮುಖ್ಯ. ಅದು ಮೋದಿ ಅವರು ಮಾಡುತ್ತಿರುವ ಕೆಲಸ ಎಂದು ಹೇಳಿದರು.ನವೆಂಬರ್ 15ರಂದು ವಿಕಸಿತ ಭಾರತ ಕಾರ್ಯಕ್ರಮ ಉದ್ಘಾಟನೆಯಾಗಿದ್ದು, ಈ ಕಾರ್ಯಕ್ರಮ ಎಲ್ಲಾ ಕಡೆ ಹೋಗುತ್ತಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬೈರತಿ ಬಸವರಾಜ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡು ಅವಧಿ ಪೂರೈಸುತ್ತಿದ್ದು, ಮತ್ತೊಂದು ಅವಧಿಗೂ ನಾವೆಲ್ಲ ಶ್ರಮವಹಿಸಿ ಪ್ರಧಾನಿ ಮಾಡಲು ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.ರಾಜ್ಯಾಧ್ಯಕ್ಷರು ನನಗೆ ರಾಜ್ಯ ಉಪಾಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ, ಪ್ರಾಮಾಣಿಕವಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಚ್ಚಿದಾನಂದ ಮೂರ್ತಿ, ರಘು ಕೌಟಿಲ್ಯ, ನಾರಾಯಣ, ಅಂತೋಣಿಸ್ವಾಮಿ, ಸಿದ್ದಲಿಂಗಯ್ಯ, ಮಾರ್ಕೆಟ್ ರಮೇಶ್, ಎಸ್.ಜಿ. ನಾಗರಾಜು ಇತರರು ಇದ್ದರು.- - -
ಪೋಟೋಕೆ.ಆರ್. ಪುರದ ಕ್ಷೇತ್ರದ ಬಿಬಿಎಂಪಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಲು ಶ್ರಮಿಸುವುದಾಗಿ ಪ್ರತಿಜ್ಞೆ ಮಾಡುತ್ತಿರುವುದು.