ಸಾರಾಂಶ
ಬೆಂಗಳೂರು : ನಕ್ಸಲ್ ವಿಕ್ರಂಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ. ಪೊಲೀಸರು ಎನ್‌ಕೌಂಟರ್ ಮಾಡದೇ ಇದ್ದರೆ, ಅವನೇ ದಾಳಿ ನಡೆಸುತ್ತಿದ್ದ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ವಿಕ್ರಂಗೌಡ ಎನ್‌ಕೌಂಟರ್ ಮೇಲೆ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ಆತನ ವಿರುದ್ಧ ಕೊಲೆ ಆರೋಪ ಸೇರಿದಂತೆ 60ಕ್ಕೂ ಹೆಚ್ಚು ಕೇಸುಗಳಿದ್ದವು. ಹಾಗಾಗಿ ಮತ್ತೊಂದು ಚಾನ್ಸ್ ತೆಗೆದುಕೊಳ್ಳುವುದು ಕಷ್ಟ ಆಗುತ್ತಿತ್ತು. ಆದ್ದರಿಂದ ಎನ್‌ಕೌಂಟರ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆತ ಆಟೋಮ್ಯಾಟಿಕ್ ಮಷಿನ್ ಗನ್ ಇಟ್ಟುಕೊಂಡಿದ್ದ. ಈ ಹಿಂದೆ ಶರಣಾಗಾತಿಗಾಗಿ ಪ್ರಯತ್ನಗಳು ನಡೆದಿದ್ದವು. ಅವರ ಸಂಬಂಧಿಕರು ಸಹ ಶರಣಾಗುವಂತೆ ಮನವೊಲಿಸಲುವ ಪ್ರಯತ್ನ ನಡೆಸಿದ್ದರೂ ವಿಕ್ರಂಗೌಡ ಒಪ್ಪಿರಲಿಲ್ಲ ಎಂದರು.
ಕಾಂಗ್ರೆಸ್ ಬಂದ ಮೇಲೆ ನಕ್ಸಲ್ ಚಟುವಟಿಕೆ ಜಾಸ್ತಿಯಾಗಿದೆ ಎಂದು ಶಾಸಕ ಸುನೀಲ್ ಕುಮಾರ್ ಆರೋಪ ಮಾಡಿದ್ದಾರೆ. ಆದರೆ, ನಕ್ಸಲ್ ನಿಗ್ರಹ ಪಡೆಯ ಹೆಡ್‌ಕ್ವಾಟ್ರಸ್ ಕಾರ್ಕಳದಲ್ಲೇ ಇದೆ. ನಕ್ಸಲ್ ನಿಗ್ರಹ ದಳ ನಕ್ಸಲ್ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾ ಇಟ್ಟುಕೊಂಡು ಬರಲಾಗಿದೆ. ಕಳೆದ ವಾರ ನಕ್ಸಲ್ ಲತಾ ಎಂಬುವರು ಗುರುತಿಸಲಾಗಿತ್ತು. ಕೂಬಿಂಗ್ ನಡೆಸಲಾಗಿತ್ತು. ಅವರನ್ನ ಹಾಗೇ ಬಿಟ್ಟುಕೊಂಡು, ಏನು ಮಾಡಿದರು ನಡೆಯುತ್ತದೆ ಎಂದು ಸಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಎನ್‌ಕೌಂಟರ್ ಮೇಲೆ ತನಿಖೆ ಆಗಬೇಕು ಎಂದು ಕೆಲವರು ಎಡಪಂಥೀಯರು ಆಗ್ರಹದ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಮಷಿನ್‌ಗನ್ ಇಟ್ಟುಕೊಂಡಿದ್ದ, 60 ಕೇಸ್ ಇರುವ ವಿಕ್ರಂಗೌಡ ಎನ್‌ಕೌಂಟರ್ ಬಗ್ಗೆ ಯಾವ ದೃಷ್ಟಿಯಿಂದ ತನಿಖೆ ಮಾಡಬೇಕು? ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಎನ್ನುವ ಪ್ರಶ್ನೆ ಬರಲ್ಲ. ಸುರಕ್ಷತೆ ಮುಖ್ಯ. ಈ ಹಿಂದೆಯೇ ಅವರನ್ನು ಸರೆಂಡರ್ ಆಗಲು ತಿಳಿಸಲಾಗಿತ್ತು. ಆದರೆ ಅವರು ಕೇಳಿರಲಿಲ್ಲ ಎಂದರು.