ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ನಂದಗೋಡನಹಳ್ಳಿ ಮರಗಳ ಹನನ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಕಳೆದ ೧೫ ದಿನಗಳ ಹಿಂದೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್ ೧೬ರಲ್ಲಿ ಹಾಗು ಪಕ್ಕದ ಸರ್ಕಾರಿ ಜಮೀನಿನಲ್ಲಿ ಮರಗಳ ಹನನ ಆಗಿದ್ದನ್ನು ಕಂಡು ಬೇಲೂರು ದಂಡಾಧಿಕಾರಿ ಮಮತಾ ಅವರ ದೂರಿನ ಅನ್ವಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ವಿಚಾರಣೆಗೆ ಆಗಮಿಸುವಂತೆ ವಿಕ್ರಮ್ ಸಿಂಹ ಅವರಿಗೆ ನೋಟಿಸ್ ನೀಡಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡದ ಕಾರಣ ಪ್ರಕರಣದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಇವರನ್ನು ಬಂಧಿಸುವಂತೆ ಒತ್ತಡ ಬಂದ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಬೆಂಗಳೂರಿನಲ್ಲಿ ವಿಕ್ರಮ ಸಿಂಹ ಅವರನ್ನು ಬಂಧಿಸಿ ಭಾನುವಾರ ಬೇಲೂರಿನ ಜೆಎಮ್‌ಎಫ್‌ಸಿ ನ್ಯಾಯಾಧೀಶರಾದ ಪ್ರಕಾಶ್ ನಾಯಕ್ ಎದುರು ಅರಣ್ಯ ಇಲಾಖೆಯ ತನಿಖಾ ತಂಡ ಅವರನ್ನು ಹಾಜರುಪಡಿಸಿದರು. ವಿಕ್ರಮ್ ಸಿಂಹ ಪರವಾಗಿ ವಕೀಲರಾದ ಚಂದ್ರೇಗೌಡ ಹಾಗೂ ಧರ್ಮೇಗೌಡ ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಸುಮಾರು ಒಂದು ಗಂಟೆಗಳ ಕಾಲ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ವಿಕ್ರಮ್ ಸಿಂಹ ಅವರಿಗೆ ಜಾಮೀನು ಮಂಜೂರು ಮಾಡಿದರು.
ಇನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುಂಚೆ ವೈದ್ಯಕೀಯ ತಪಾಸಣೆಗೆಂದು ಕರೆದೊಯ್ದಾಗ ವಿಕ್ರಂ ಸಿಂಹಗೆ ಅಧಿಕ ರಕ್ತದೊತ್ತಡ ಕಂಡುಬಂತು. ಈ ವೇಳೆ ವೈದ್ಯರ ಸಲಹೆ ಮೇರೆಗೆ ಸ್ವಲ್ಪ ಸಮಯ ವಿಶ್ರಾಂತಿಗೆ ಸೂಚಿಸಲಾಗಿತ್ತು.ಇದೇ ವೇಳೆ ಮಾತನಾಡಿದ ವಿಕ್ರಮ ಸಿಂಹ ಪರ ವಾದಿಸಿದ ವಕೀಲರಾದ ಚಂದ್ರೇಗೌಡ ಕರ್ನಾಟಕ ಅರಣ್ಯ ಕಾಯ್ದೆ ಕಾಲಂ ೩೩(೫)೬೨.೮೦,೭೧ಎ ,೭೧ ಜಿ,೧೪೪/ಅನ್ವಯ ಅರಣ್ಯ ಇಲಾಖೆ ಕಾಯ್ದೆಗಳು ಜಾಮೀನಿಗೆ ಒಳಪಡುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಯಾವುದೇ ಷರತ್ತಿಲ್ಲದೆ ಜಾಮೀನಿನ ಪ್ರಕರಣವಾಗಿರುವುದರಿಂದ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಸಹ ವಿಕ್ರಮ್ ಸಿಂಹ ಅವರೇ ಮರಗಳನ್ನು ಕಡಿದಿದ್ದಾರೆ ಎಂಬ ಯಾವುದೇ ದಾಖಲೆ ಇಲ್ಲದೆ ಕೇವಲ ಶಂಕಿತ ಆರೋಪಿ ಎಂದು ಬಂಧಿಸಲಾಗಿತ್ತು. ಈಗಾಗಲೇ ಸಂಪೂರ್ಣ ದಾಖಲಾತಿಯನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ ಎಂದರು.ಇದೇ ವೇಳೆ ವಿಕ್ರಂ ಸಿಂಹ ಅವರನ್ನು ಕರೆ ತಂದ ಸಂದರ್ಭದಲ್ಲಿ ನ್ಯಾಯಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸತ್ಯಕ್ಕೆ ಸಂದ ಜಯ: ಜಾಮೀನಿನ ಬಳಿಕ ಮಾತನಾಡಿದ ಸಂಸದ ಪ್ರತಾಪ ಸಿಂಹ ಸಹೋದರ ವಿಕ್ರಂ ಸಿಂಹ, ನ್ಯಾಯಾಲಯದಲ್ಲಿ ನಮಗೆ ಸತ್ಯಕ್ಕೆ ಜಯ ಸಿಕ್ಕಿದೆ. ಯಾವುದೇ ತಪ್ಪು ಮಾಡದ ನನ್ನ ಮೇಲೆ ರಾಜಕೀಯ ಪಿತೂರಿಗೆ ಹಾಗೂ ರಾಜಕೀಯ ದ್ವೇಷಕ್ಕೆ ನನ್ನ ಮೇಲೆ ಆರೋಪಿ ಪಟ್ಟವನ್ನು ಕಟ್ಟಿದ್ದಾರೆ. ನಾನು ಯಾವುದೇ ಮರವನ್ನು ಕಡಿದಿಲ್ಲ. ಶುಂಠಿ ಬೆಳೆ ಮಾಡಲು ಹೋದವನಿಗೆ ಇಂತಹ ಆರೋಪಗಳನ್ನು ಎದುರಿಸಬೇಕಾಯಿತು. ಇದು ಒಂದು ರೀತಿಯಲ್ಲಿ ರಾಜಕೀಯ ಷಡ್ಯಂತ್ರ. ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು ಇಂದು ಸತ್ಯಕ್ಕೆ ಜಯ ಎಂಬುವುದಕ್ಕೆ ಸಾಕ್ಷಿ ಎಂದು ಮಾಧ್ಯಮಕ್ಕೆ ತಿಳಿಸಿದರು.ಗೆಸ್ಟ್‌ಹೌಸ್‌ನಲ್ಲಿ ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಬಂಧಿಸಿ ನಗರದ ಹೊರವಲಯದ ಗೆಂಡೆಕಟ್ಟೆ ಅರಣ್ಯ ಪ್ರದೇಶದ ಅರಣ್ಯ ಇಲಾಖೆ ಗೆಸ್ಟ್ ಹೌಸ್‌ನಲ್ಲಿ ವಿಚಾರಣೆ ನಡೆಸಲಾಯಿತು.
ಕಳೆದ ಒಂದು ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಬಂಧಿಸಿ ಹಾಸನಕ್ಕೆ ಕರೆತಂದಿರೊ ಅರಣ್ಯ ಇಲಾಖೆ ಅಧಿಕಾರಿಗಳು. ರಾತ್ರಿ ಗೆಂಡೆಕಟ್ಟೆ ಅರಣ್ಯ ಪ್ರದೇಶದ ಗೆಸ್ಟ್ ಹೌಸ್ ನಲ್ಲಿ ವಿಕ್ರಂ ಸಿಂಹಗೆ ಆಶ್ರಯ ನೀಡಿದ್ದರು. ಬೆಳಿಗ್ಗೆ ವಿಚಾರಣೆ ಬಳಿಕ ಸ್ಥಳ ಮಹಜರ್ ಸಾಧ್ಯತೆಯಿದೆ. ಸ್ಥಳ ಮಹಜರ್ ಬಳಿಕ ಮೆಡಿಕಲ್ ಚೆಕಪ್ ನಡೆಸಿ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಿತ್ತು. ನ್ಯಾಯಾಲಯ ರಜೆ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿ ವಿಕ್ರಮ್ ಸಿಂಹರನ್ನ ನ್ಯಾಯಾಧೀಶರ ಎದುರು ಹಾಜರುಪಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.