ಗ್ರಾಮದೇವತೆಗಳ ಪುರಪ್ರವೇಶದ ಮೂಲಕ ಉತ್ಸವಕ್ಕೆ ಚಾಲನೆ

| Published : May 03 2025, 12:16 AM IST

ಸಾರಾಂಶ

ತಿರ್ಲಾಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆಗಳ ಪ್ರಾಣ ಪ್ರತಿಷ್ಠಾಪನೆ ಜಾತ್ರೆ ಆರಂಭಗೊಂಡ ಭವ್ಯ ಮೆರವಣಿಗೆ ಮೂಲಕ ಗ್ರಾಮದೇವಿಯರ ಪುರ ಪ್ರವೇಶ ಸಾಂಸ್ಕೃತಿಕ ಸೊಗಡು ಹೆಚ್ಚಿಸಿತು

ನವಲಗುಂದ: ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆಗಳ ಪ್ರಾಣ ಪ್ರತಿಷ್ಠಾಪನೆ ಜಾತ್ರೆ ಆರಂಭಗೊಂಡ ಭವ್ಯ ಮೆರವಣಿಗೆ ಮೂಲಕ ಗ್ರಾಮದೇವಿಯರ ಪುರ ಪ್ರವೇಶ ಸಾಂಸ್ಕೃತಿಕ ಸೊಗಡು ಹೆಚ್ಚಿಸಿತು.

ತಿರ್ಲಾಪುರ ಗ್ರಾಮದ ಸೀಮೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಅಂದಾನಯ್ಯ ಹಿರೇಮಠ, ಆರ್.ಎಚ್.ಈರಡ್ಡಿ ಇತರರು ಗ್ರಾಮದೇವಿಯರ ಮೂರ್ತಿಗಳನ್ನು ಹೊತ್ತು ತಂದು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ಕುಂಭಮೇಳ, ಸುಮಂಗಲೆಯರ ಆರತಿ, ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಮೆರಗು ತಂದವು.

ಕಟಕೋಳ-ಎಂ. ಚಂದರಗಿ ಸಂಸ್ಥಾನ ಹಿರೇಮಠದ ಶ್ರೀಶಿವಾಚಾರ್ಯರತ್ನ ತಪೋಭೂಷಣ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಿರ್ಲಾಪುರ ಗ್ರಾಮದ ಶ್ರೀಮಲ್ಲಿಕಾರ್ಜುನಯ್ಯ ಬಸಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕುಂಬಿಯ ಶ್ರೀಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠದ ಅಭಿನವ ಶ್ರೀನಾಗಲಿಂಗ ಮಹಾಸ್ವಾಮಿಗಳು ಸಮ್ಮುಖದಲ್ಲಿ ಗ್ರಾಮ ದೇವತೆಯರ ಪುರಪ್ರವೇಶ ಕಾರ್ಯಕ್ರಮ ನಡೆಯಿತು.

ಜಾತ್ರೆ ನಿಮಿತ್ತ 5 ದಿನಗಳ ಕಾಲ ನಡೆಯುವ ದೇವಿ ಪುರಾಣಕ್ಕೆ ಸಂಜೆ ಭವ್ಯ ವೇದಿಕೆಯಲ್ಲಿ ಮಾತೋಶ್ರೀ ಶಿವಯೋಗಿನಿ ದೇವಿ ಶ್ರೀ ಚನ್ನಬಸವೇಂದ್ರ ಲಿಲಾಮಠ ಜಕನಾಯ್ಕನಕೊಪ್ಪ ಇವರಿಂದ ಶ್ರೀ ದೇವಿಪುರಾಣಕ್ಕೆ ಚಾಲನೆ ನೀಡಲಾಯಿತು.

ತಿರ್ಲಾಪುರ ಗ್ರಾಮ ಮೊದಲಿನಿಂದಲೂ ಧಾರ್ಮಿಕ ಆಚರಣೆಯಲ್ಲಿ ಸುಪ್ರಸಿದ್ಧ ಗ್ರಾಮದಲ್ಲಿ ಎಲ್ಲ ಸಮುದಾಯದ, ಎಲ್ಲ ವೃತ್ತಿಯ ಜನರು ಜಾತಿ-ಮತ ಪಂಥ ಭೇದವಿಲ್ಲದೆ ಗ್ರಾಮ ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಮಹೇಶ ಬಕ್ಕಣ್ಣವರ ತಿಳಿಸಿದ್ದಾರೆ.