ಇಂದಿನಿಂದ ಗ್ರಾಮ ದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

| Published : Feb 23 2024, 01:48 AM IST

ಇಂದಿನಿಂದ ಗ್ರಾಮ ದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದ್ಯಾಮವ್ವದೇವಿ ಜಾತ್ರಾ ಮಹೋತ್ಸವಕ್ಕೆ ಫೆ.೨೩ರಂದು ಚಾಲನೆ ದೊರೆಯಲಿದ್ದು, ನಗರದಲ್ಲಿ 4 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯ ಸಂಭ್ರಮ ಕಳೆಕಟ್ಟಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಐತಿಹಾಸಿಕ ಪ್ರಸಿದ್ಧ ಹಾವೇರಿ ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವಕ್ಕೆ ಫೆ.೨೩ರಂದು ಚಾಲನೆ ದೊರೆಯಲಿದ್ದು, ನಗರದಲ್ಲಿ 4 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯ ಸಂಭ್ರಮ ಕಳೆಕಟ್ಟಿದೆ.

ಜಾತ್ರಾ ಮಹೋತ್ಸವದ ನಿಮಿತ್ತ ನಗರದೆಲ್ಲೆಡೆ ಸಂಭ್ರಮ ಮನೆಮಾಡಿದ್ದು, ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಹುಕ್ಕೇರಿಮಠದ ಬಳಿ ದ್ವಾರ ಬಾಗಿಲು, ಗಾಂಧಿ ರಸ್ತೆಯ ಚೌತಮನಿ ಕಟ್ಟೆಯಲ್ಲಿ ಭವ್ಯ ಮಂಟಪ ನಿರ್ಮಾಣಗೊಂಡಿದೆ.

ಅಂಕಿ ಹಾಕುವ ಕಾರ್ಯ:

ಜಾತ್ರಾ ಮಹೋತ್ಸವದ ನಿಮಿತ್ತ ಫೆ.೨೩ರಂದು ಸಂಜೆ ೫ಕ್ಕೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ದೇವಸ್ಥಾನದ ಓಣಿಯಲ್ಲಿ ಅಂಕಿ ಹಾಕುವುದು ಹಾಗೂ ಪಡ್ಲಗಿ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ನಗರದ ವ್ಯಾಪ್ತಿ ದೊಡ್ಡದಿರುವುದರಿಂದ ದ್ಯಾಮವ್ವನ ಓಣಿ ವ್ಯಾಪ್ತಿಯಲ್ಲಿ ಮಾತ್ರ ಕಟ್ಟುನಿಟ್ಟಿನ ಧಾರ್ಮಿಕ ಕಾರ್ಯ ನಡೆಯಲಿವೆ.

ನಗರದ ಹೃದಯ ಭಾಗ ಮಹಾತ್ಮ ಗಾಂಧಿ ರಸ್ತೆಯಲ್ಲಿ ದ್ಯಾಮವ್ವನ ಪಾದಗಟ್ಟೆ ಸ್ಥಳವಿದೆ. ಇದೇ ರಸ್ತೆಯಲ್ಲಿ ದ್ಯಾಮವ್ವ ದೇವಿ ಚೌತಮನಿಕಟ್ಟಿ ಇದ್ದು, ಜಾತ್ರೆ ವೇಳೆ ದ್ಯಾಮವ್ವದೇವಿ ಮೆರವಣಿಗೆಯಲ್ಲಿ ದೇವಸ್ಥಾನದಿಂದ ಹೊರಟು ಚೌತಮನಿಕಟ್ಟೆಗೆ ಬಂದು ಆಸಿನಳಾಗುತ್ತಾಳೆ. ಜಾತ್ರೆಯ ಎಲ್ಲ ರೀತಿಯ ವಿಶೇಷ ಪೂಜಾ ಕಾರ್ಯಗಳು ಇದೇ ಕಟ್ಟೆಯಲ್ಲಿ ನಡೆಯಲಿವೆ.

ಭವ್ಯ ಮೆರವಣಿಗೆ:

ಫೆ.೨೭ರಂದು ನಗರದ ದೇವಸ್ಥಾನಗಳಿಗೆ ನೈವೇದ್ಯ ಮಾಡಿಸುವುದು, ಅದೇ ದಿನ ಸಂಜೆ ೪.೩೦ ಗಂಟೆಗೆ ವಿವಿಧ ವಾದ್ಯವೈಭೋಗ, ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ಭವ್ಯ ಉತ್ಸವ ಮೆರವಣಿಗೆ ಆರಂಭಗೊಳ್ಳಲಿದೆ.

ಮೆರವಣಿಗೆ ಸಾಗುವ ಮಾರ್ಗ:

ಮೆರವಣಿಗೆಯು ನಗರದ ದ್ಯಾಮವ್ವನ ಗುಡಿಯಿಂದ ನಾಯ್ಕರಚಾಳ, ಹಳೆಅಂಚೆ ಕಚೇರಿ ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ, ಜೈನರ ರಸ್ತೆ, ಹಳೆ ಊರಿನ ಓಣಿ, ಶ್ರೀರಾಮದೇವರ ಗುಡಿ, ಗಾಂಧಿವೃತ್ತ, ಕಲ್ಲುಮಂಟಪ ರಸ್ತೆ, ಬಸ್ತಿಓಣಿ, ತರಕಾರಿ ಮಾರುಕಟ್ಟೆ, ಗೌಳಿಗಲ್ಲಿ, ಯಾಲಕ್ಕಿ ಓಣಿ, ಗುಜ್ಜರ ಗುಡಿ, ಪುರದ ಓಣಿ, ಚೌಡೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಸುಭಾಸ ವೃತ್ತ, ಮೇಲಿನಪೇಟೆ, ಗಾಂಧಿರಸ್ತೆ, ಹಳೆಚಾವಡಿ ಮೂಲಕ ಫೆ.೨೮ರ ಬೆಳಗ್ಗೆ ನಸುಕಿನ ೪ಗಂಟೆಗೆ ಚೌತಮನಿ ಕಟ್ಟೆಯಲ್ಲಿ ಗ್ರಾಮದೇವತೆ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ.

ಮಾ.೨ಕ್ಕೆ ಓಕಳಿ:

ಫೆ.೨೮ರಂದು ಪ್ರಾಥಃಕಾಲ ೫ಗಂಟೆಗೆ ರಂಗ ಹೊಯ್ಯುವುದು, ಉಡಿ ತುಂಬಿಸುವುದು, ಹಣ್ಣು-ಕಾಯಿ ನೈವೇದ್ಯ, ಸಾರ್ವಜನಿಕರಿಂದ ವಿವಿಧ ಸೇವೆ, ಹರಕೆ, ಕಾಣಿ ಸಮರ್ಪಣೆ ನಡೆಯಲಿದೆ. ಮಾ.೨ರವರೆಗೆ ಶ್ರೀದೇವಿಗೆ ಸೇವೆ ಮುಂದುವರಿಯಲಿದ್ದು, ಅಂದು ಸಂಜೆ ೪ಗಂಟೆಗೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ. ಜಾತ್ರೆ ಆಚರಣೆ ವರ್ಷ ನಗರದಲ್ಲಿ ಹೋಳಿ ಹಬ್ಬ ಆಚರಿಸದಿರಲು ತೀರ್ಮಾನಿಸಲಾಗಿದೆ. ಆದರೆ, ಮಾ.೨ರ ಮಧ್ಯಾಹ್ನ ೨.೩೦ ಗಂಟೆಗೆ ಚೌತಮನಿಕಟ್ಟಿಯಿಂದ ಹುಕ್ಕೇರಿಮಠದವರೆಗೆ ಕುಂಕುಮ, ಬಂಡಾರದಿಂದ ಓಕಳಿ ಆಡುವ ಸಂಭ್ರಮ ನಡೆಯಲಿದೆ. ಮಾ.೫ರಂದು ಬೆಳಗ್ಗೆ ೧೦ಗಂಟೆಗೆ ದ್ಯಾಮವ್ವ ದೇವಿಯನ್ನು ಗುಡಿ ತುಂಬಿಸುವುದು, ಶ್ರೀದೇವಿಗೆ ಕ್ಷೀರಾಭಿಷೇಕ, ಚಂಡಿಪಾರಾಯಣ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬೆಟ್ಟಪ್ಪ ಕುಳೇನೂರ ತಿಳಿಸಿದ್ದಾರೆ.