ಉದ್ಯೋಗ ಖಾತ್ರಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ ಇದರಿಂದ ಸಾಕಷ್ಟು ತೊಂದರೆ ಆಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದರು ಆದರೆ ಕೇಂದ್ರ ಸರ್ಕಾರ ವಿಬಿಜಿ ರಾಮ್‌ಜಿ ಯೋಜನೆಯನ್ನು ಹೊಸದಾಗಿ ಪರಿಚಯ ಮಾಡಿ ಕುಟುಂಬಕ್ಕೆ ವಾರ್ಷಿಕ 125 ಮಾನವ ದಿನಗಳನ್ನು ಮಾಡಿರುವುದಲ್ಲದೆ ಉದ್ಯೋಗ ಖಾತ್ರಿಗಿಂತ ಹೆಚ್ಚುವರಿ ಕೂಲಿ ಹಣ ನೀಡುತ್ತಿದೆ ಉದ್ಯೋಗ ಖಾತ್ರಿಯಲ್ಲಿ ಗಂಡು ಹಾಗೂ ಹೆಣ್ಣಿಗೆ ದಿನವಹಿ 382 ರು. ನಿಗದಿ ಮಾಡುವ ಮೂಲಕ ಕೂಲಿಯಲ್ಲಿನ ತಾರತಮ್ಯವನ್ನು ಕೇಂದ್ರ ಸರ್ಕಾರ ಹೋಗಲಾಡಿಸಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವಿಬಿಜಿ ರಾಮ್‌ಜಿ ಯೋಜನೆ ಅಡಿಯಲ್ಲಿ ಗಂಡು ಹೆಣ್ಣಿಗೆ ಸಮಾನ ಕೂಲಿ ದೊರೆಯಲಿದ್ದು ಇದನ್ನು ಗ್ರಾಮ ಪಂಚಾಯಿತಿಯಿಂದ ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಗ್ರಾಮಗಳ ಅಭಿವೃದ್ಧಿ ಮಾಡಬಹುದಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಹಿರೀಸಾವೆ ಹೋಬಳಿ ಡಿ.ತುಮಕೂರು ಗ್ರಾಮದಲ್ಲಿ ದಿಡಗ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ವಿಬಿಜಿ ರಾಮ್‌ಜಿ ಯೋಜನೆಗೆ ಹಾಸನ ಜಿಲ್ಲೆಗೆ ಕೇಂದ್ರ ಸರ್ಕಾರ 1700 ಕೋಟಿ ರು. ಹಾಗೂ ರಾಜ್ಯ 1200 ಕೋಟಿ ರೂ. ಅನುದಾನ ನೀಡಿದ್ದು ಒಟ್ಟು 2900 ಕೋಟಿ ರೂ. ಈ ಯೋಜನೆಗೆ ಮೀಸಲಿಟ್ಟಿದೆ ಇದರಿಂದ ಸಾಕಷ್ಟು ಕೆಲಸಗಳನ್ನು ಮಾಡಿಸಬಹುದಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಭೆಯ ನೆಪ ಹೇಳಿಕೊಂಡು ಪಟ್ಟಣಕ್ಕೆ ಬರುವುದನ್ನು ಕಡಿಮೆ ಮಾಡಬೇಕು, ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಇದ್ದು ಕ್ರಿಯಾ ಯೋಜನೆ ರೂಪಿಸಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಮಳೆಗಾಲ ಕಡಿಮೆ ಇದೆ ಹಾಗಾಗಿ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ಅಂತರ್ಜಲ ವೃದ್ಧಿಗೆ ಶ್ರಮಿಸಬೇಕು, ಹೈನುಗಾರಿಕೆಗೆ ಅನುಕೂಲ ಆಗುವ ನಟ್ಟಿನಲ್ಲಿ ರಾಸುಗಳ ಕೊಟ್ಟಿಗೆ ನಿರ್ಮಾಣದ ಕಡೆ ಗಮನ ಹರಿಸಬೇಕು ಎಂದು ಸೂಚಿಸಿದರು. ಉದ್ಯೋಗ ಖಾತ್ರಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ ಇದರಿಂದ ಸಾಕಷ್ಟು ತೊಂದರೆ ಆಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದರು ಆದರೆ ಕೇಂದ್ರ ಸರ್ಕಾರ ವಿಬಿಜಿ ರಾಮ್‌ಜಿ ಯೋಜನೆಯನ್ನು ಹೊಸದಾಗಿ ಪರಿಚಯ ಮಾಡಿ ಕುಟುಂಬಕ್ಕೆ ವಾರ್ಷಿಕ 125 ಮಾನವ ದಿನಗಳನ್ನು ಮಾಡಿರುವುದಲ್ಲದೆ ಉದ್ಯೋಗ ಖಾತ್ರಿಗಿಂತ ಹೆಚ್ಚುವರಿ ಕೂಲಿ ಹಣ ನೀಡುತ್ತಿದೆ ಉದ್ಯೋಗ ಖಾತ್ರಿಯಲ್ಲಿ ಗಂಡು ಹಾಗೂ ಹೆಣ್ಣಿಗೆ ದಿನವಹಿ 382 ರು. ನಿಗದಿ ಮಾಡುವ ಮೂಲಕ ಕೂಲಿಯಲ್ಲಿನ ತಾರತಮ್ಯವನ್ನು ಕೇಂದ್ರ ಸರ್ಕಾರ ಹೋಗಲಾಡಿಸಿದೆ ಎಂದರು.

ಗ್ರಾಮೀಣ ಭಾಗದ ರೈತರು ಕೃಷಿ ಜೊತೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಬಿಜಿ ರಾಮ್‌ಜಿಯಲ್ಲಿ ಹಾಲು ಉತ್ಪಾದಕರ ಸಹಕಾರ ಕಟ್ಟಡ ನಿರ್ಮಾಣಕ್ಕೆ ಯೋಜನೆ ಪೂರಕಾಗಿ ನಿರ್ಮಿಸಿದ್ಧಾರೆ, ಕೃಷಿ ಆಧಾರಿತ ಕಾಮಗಾರಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಮಾಡುವ ರೈತರಿಗೆ ಹೆಚ್ಚುಅನುಕೂಲ ಆಗುತ್ತಿದೆ ಕೃಷಿಕರು ಪಟ್ಟಣದ ಸುತ್ತುವುದನ್ನು ಬಿಟ್ಟು ತಮ್ಮ ಕೃಷಿ ಭೂಮಿ ಅಭಿವೃದ್ಧಿ ಮಾಡಿಕೊಂಡರೆ ಕೂಲಿಯ ಮೂಲಕ ಹಣವನ್ನು ನೇರವಾಗಿ ತಮ್ಮ ಖಾತೆಗೆ ಸರ್ಕಾರದ ಮೂಲಕ ಜಮೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಕಿವಿಮಾತು ಹೇಳಿದರು.

ಸಮಗ್ರ ಕೆರೆ ಕಟ್ಟೆ ಅಭಿವೃದ್ಧಿ, ಅಂಗನವಾಡಿ ಕಟ್ಟಡ ನಿರ್ಮಾಣ, ನಾಲೆಗಳ ಅಭಿವೃದ್ಧಿ, ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ಶೌಚಾಲಯಗಳ ನಿರ್ಮಾಣಕ್ಕೂ ಯೋಜನೆ ಸಾಕಷ್ಟು ಪೂರಕವಾಗಿದೆ, ಪ್ರತಿ ಗ್ರಾಮ ಪಂಚಾಯಿತಿ ಒಂದು ಕೋಟಿ ರು.ಗೆ ಕ್ರಿಯಾ ಯೋಜನೆ ರೂಪಿಸಿದರೆ ₹ 10 ಲಕ್ಷ ವೆಚ್ಚದಲ್ಲಿ ಗ್ರಾಮಗಳ ರಸ್ತೆ ಅಭಿವೃದ್ಧಿ ಮಾಡಿಸಬಹುದಾಗಿದೆ, ಶಿಸ್ತುಬದ್ಧವಾಗಿ ವಿಬಿಜಿ ರಾಮ್‌ಜಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಇದಕ್ಕೆ ಪೂಕರವಾಗಿ ಪಿಡಿಒಗಳು ಕೆಲಸ ಮಾಡಬೇಕಿದೆ ಎಂದು ತಾಕಿತ್ತು ಮಾಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ. ಆರ್‌. ಹರೀಶ್ ಕಾಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ೨೩೮ ತಾಲೂಕುಗಳಲ್ಲಿ ಕರ ಸಂಗ್ರಹಣೆಯಲ್ಲಿ ಚನ್ನರಾಯಪಟ್ಟಣ ತಾಲೂಕು ಮೊದಲ ಸ್ಥಾನವನ್ನು ಕಳೆದ ನಾಲ್ಕು ದಿವಸಗಳಿಂದ ತನ್ನದಾಗಿಸಿಕೊಂಡಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮದಿಂದ ರಾಜ್ಯಕ್ಕೆ ಅಗ್ರಗಣ್ಯ ಸ್ಥಾನವನ್ನು ಪಡೆಯಸಲು ಸಾಧ್ಯವಾಗಿದೆ ಇದು ತಾಲೂಕಿಗೆ ಸಂದ ಗೌರವ ಎಂದು ಶ್ಲಾಘಿಸಿದರು.

ಕೇಂದ್ರ ಸರ್ಕಾರ ವಿಬಿಜಿ ರಾಮ್‌ಜಿ ಯೋಜನೆಯಿಂದ ತಾಲೂಕಿಗೆ 11.08392 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ, ಬರಗಾಲ ಇರುವುದರಿಂದ ಗ್ರಾಮೀಣ ಭಾಗದ ಜನತೆ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಸಭೆ ಮಾಡಿ ವಿಬಿಜಿ ರಾಮ್ ಜಿ ಮೂಲಕ ಜನರಿಗೆ ಉದ್ಯೋಗ ನೀಡುವುದನ್ನು ತಿಳಿಸುವ ಮಹತ್ತರ ಕೆಲಸ ಮಾಡುವಂತೆ ಆದೇಶಿಸಿದೆ ಎಂದರು.

ವಿಬಿಜಿ ರಾಮ್‌ಜಿ ಯೋಜನೆಗೆ ಕೇಂದ್ರದಿಂದ 5709 ಕೋಟಿ ರು. ಹಾಗೂ ರಾಜ್ಯ ಸರ್ಕಾರ ₹ 3771 ಕೋಟಿ ಹಣ ಮೀಸಲಿಟ್ಟಿದೆ ಇದರಿಂದ 13.71ಕೋಟಿ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಲ್ಲಾವಳಿ ಯೋಗೇಶ್, ಬಿಇಒ ಸತೀಶ್, ಬಿಆರ್‌ಸಿ ಅನಿಲ್, ದಿಡಗ ಗ್ರಾಮ ಪಂಚಾಯಿತಿ ಅಭಿವೃದ್ದಿ ಕೆ.ಎಸ್.ಪ್ರಕಾಶ್, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ದಿಡಗ ಗ್ರಾಪಂ ವ್ಯಾಪ್ತಿಯ ಅನೇಕ ಗ್ರಾಮಸ್ಥರು ಡಿ.ತುಮಕೂರು ಗ್ರಾಮಸ್ಥರು ಉಪಸ್ಥಿತರಿದ್ದರು.