ಗ್ರಾಮೀಣ ಕಲೆಗಳನ್ನು ಜೀವಂತವಾಗಿಡಲು ಗಿರಿಜನ ಉತ್ಸವ ಸಹಕಾರಿ: ಡಾ. ನಾಗಣ್ಣ

| Published : Jan 10 2024, 01:46 AM IST

ಸಾರಾಂಶ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ‘ಗಿರಿಜನ ಉತ್ಸವ’ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಸೋಮನ ಕುಣಿತ, ಮ್ಯಾಸಿಫ್ ಡೋಲು, ಗಾರುಡಿಗೊಂಬೆ, ಚಕ್ಕೆ ಭಜನೆ, ಸುಗಮ ಸಂಗೀತ, ಜನಪದ ಗೀತೆ, ರಂಗಗೀತೆ, ಪೌರಾಣಿಕ ನಾಟಕಗಳಂತಹ ಗ್ರಾಮೀಣ ಕಲೆಗಳು ನಶಿಸಿ ಹೋಗದಂತೆ ಜೀವಂತವಾಗಿಡಲು ಗಿರಿಜನ ಉತ್ಸವದಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿ ಡಾ. ನಾಗಣ್ಣ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊರಟಗೆರೆ ತಾಲೂಕು ಹಂಚಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ‘ಗಿರಿಜನ ಉತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಿರಿಜನ ಉತ್ಸವವು ಸರ್ಕಾರದ ಅತ್ಯುತ್ತಮ ಯೋಜನೆಯಾಗಿದ್ದು, ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ಪಂಗಡದ ಕಲಾವಿದರಿಗೆ ವೇದಿಕೆ ಒದಗಿಸುವ ಮೂಲಕ ಗ್ರಾಮೀಣ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಹಂಚಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಭೀಮರಾಜು ಅವರು ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಗಡಿ ತಾಲೂಕು ಮತ್ತು ಗ್ರಾಮದಲ್ಲಿ ನಡೆಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ದಿನಗಳಲ್ಲಿ ಟಿವಿ, ಮೊಬೈಲ್‌ಗಳಲ್ಲಿಯೇ ಕಾಲ ಕಳೆಯುವುದು ಗೀಳಾಗಿ ಮಾರ್ಪಟ್ಟಿದೆ. ಇದರ ಬದಲಾಗಿ ಗ್ರಾಮೀಣ ಸೊಗಡನ್ನು ಪಸರಿಸುವಂತಹ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ, ಇಲಾಖೆಯು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಲ್ಲಿ ಗಿರಿಜನ ಉಪಯೋಜನೆಯಡಿ ಈ ಕಾರ್ಯಕ್ರಮವನ್ನು ರೂಪಿಸಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಅದರಲ್ಲೂ ಕಾರ್ಯಕ್ರಮ ಪ್ರದರ್ಶನಕ್ಕೆ ವೇದಿಕೆ ಸಿಗದ ಹಲವು ಪ್ರತಿಭಾವಂತ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಸ್ವರ ಸಿಂಚನ ಸುಗಮ ಸಂಗೀತ ಸಂಸ್ಥೆಯ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಜಾನಪದ ಕಲಾ ಪ್ರಕಾರಗಳ ಉಳಿವು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾಂಸ್ಕೃತಿಕ ಆಚರಣೆಗಳ ಪುನರುಜ್ಜೀವನಕ್ಕಾಗಿ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಜನಪ್ರಿಯಗೊಳಿಸುವ ಮುಖೇನ ಅವುಗಳನ್ನು ಮುಖ್ಯ ವಾಹಿನಿಗೆ ತರಲು ಇಂತಹ ಕಾರ್ಯಕ್ರಮಗಳು ಹೆಚ್ಚು ಪೂರಕವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್, ಕೊರಟಗೆರೆ ತಾಲೂಕಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಕೆ.ಆರ್‌. ಓಬಳರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಎನ್. ರೇಣುಕಾ, ಮಹರ್ಷಿ ವಾಲ್ಮೀಕಿ ಕಲಾಸಂಘದ ಅಧ್ಯಕ್ಷ ಹನುಮಂತರಾಜು, ಹಿರಿಯ ಕಲಾವಿದರಾದ ರಾಮಕೃಷ್ಣಯ್ಯ ಚಿಕ್ಕಪಾಲನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ. ಸುರೇಶ್ ಕುಮಾರ್ ಹಾಗೂ ಹಂಚಿಹಳ್ಳಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಕೊರಟಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಆರ್‌. ಓಬಳರಾಜು ಅವರು ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಡಾ. ರಾಜ್ ಕುಮಾರ್ ವಾಯ್ಸ್ ಖ್ಯಾತಿಯ ಎಲ್. ಮಂಜಣ್ಣ ತಂಡದಿಂದ ಸಂಗೀತ, ನಾಡಿನ ಖ್ಯಾತ ಜನಪದ ಗಾಯಕರಾದ ಡಿ.ಆರ್‌. ರಾಜಪ್ಪ ತಂಡದಿಂದ ಜನಪದ ಗೀತೆ, ಗೆಜ್ಜೆನಾದ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ರಂಗಗೀತೆ, ಮಹರ್ಷಿ ವಾಲ್ಮೀಕಿ ಕಲಾಸಂಘ(ರಿ)ದ ವತಿಯಿಂದ ಪೌರಾಣಿಕ ನಾಟಕ (ಕುರುಕ್ಷೇತ್ರ) ಕಾರ್ಯಕ್ರಮಗಳನ್ನು ನಡೆಸಲಾಯಿತು.ಬಾಕ್ಸ್

ಮನ ಸೆಳೆದ ಮೆರವಣಿಗೆ

ಕೆಂಪರಾಜು ತಂಡದಿಂದ ಸೋಮನಕುಣಿತ, ಶಿವಶಂಕರಯ್ಯ ತಂಡದಿಂದ ಮ್ಯಾಸಿಫ್ ಡೋಲು, ಬಲರಾಮ ತಂಡದಿಂದ ಗಾರುಡಿಗೊಂಬೆ, ಮಲ್ಲಿಕಾರ್ಜುನ ತಂಡದಿಂದ ಚಕ್ಕೆಭಜನೆ, ಜಯಸಿಂಹ ತಂಡದಿಂದ ನಾಸಿಕ್ ಡೋಲು ಹಾಗೂ ರಾಜಶೇಖರ್ ತಂಡದಿಂದ ಪೂಜಾ ಕುಣಿತ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.ಕೋಟ್...

ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಕಲೆಗಳನ್ನು ಇನ್ನು ಜೀವಂತವಾಗಿ ಉಳಿಸಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಧ್ಯವಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಗಿರಿಜನರ ಪ್ರತಿಭೆ ಹಾಗೂ ಅವರ ವೈವಿಧ್ಯಮಯ ಕಲೆಗಳನ್ನು ಪ್ರದರ್ಶಿಸಲು ಹಾಗೂ ಪ್ರೋತ್ಸಾಹಿಸಲು ಸಾಧ್ಯವಾಗಿದೆ.

ಮೈಲಾರಪ್ಪ, ಅಧ್ಯಕ್ಷರು, ತಾಲೂಕು ರಂಗಭೂಮಿ ಕಲಾವಿದರ ಸಂಘ.