ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಬಂಡಿಹಳ್ಳಿ ಗ್ರಾಮಸ್ಥರಿಂದ ಗ್ರಾಮದ ಜಮೀನನ್ನು ಉಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.ಪಟ್ಟಣದ ಸಮೀಪದ ಕಸಬಾ ಹೋಬಳಿ ಬಂಡಿಹಳ್ಳಿ ಗ್ರಾಮದಲ್ಲಿ ಸರ್ವೇ ನಂಬರ್ ೯೦ರಿಂದ ೯೪ರಲ್ಲಿ ಸುಮಾರು ೧೦ಕ್ಕೂ ಹೆಚ್ಚು ರೈತರು ಕಾಲದಿಂದಲೂ ಸಹ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಆದರೆ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಈ ಜಮೀನು ನಮಗೆ ಸೇರಿದ್ದು ಎಂದು ರೈತರನ್ನ ದಬ್ಬಾಳಿಕೆ ಮೂಲಕ ಹೊರಹಾಕಿ ಲೇಔಟ್ ಮಾಡಲು ಮುಂದಾಗಿದ್ದಾರೆ. ರೈತರ ಕೆಲಸ ಮಾಡಿಕೊಂಡು ಬರುತ್ತಿರುವಂತಹ ನಾವು, ಜಮೀನು ಬಿಟ್ಟುಕೊಡಲು ಹೇಗೆ ಸಾಧ್ಯ. ಈ ಬಗ್ಗೆ ಸಾಕಷ್ಟು ನೋವನ್ನ ಅನುಭವಿಸಿದ್ದು ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿದ್ದೇವೆ. ಆದರೆ ನ್ಯಾಯಾಲಯದಲ್ಲಿ ಇನ್ನು ಪ್ರಕರಣವಿದ್ದರೂ ಸಹ ತಹಸೀಲ್ದಾರ್ ಮತ್ತು ಡಿವೈಎಸ್ಪಿ ಅವರು ಇತ್ತೀಚಿಗೆ ಏಕಾಏಕಿ ಜಮೀನಿಗೆ ಬಂದು ಬೆಳೆಸಿದ್ದಂತಹ ಮರಗಳನ್ನು ತೆರವುಗೊಳಿಸಿ ತೆಂಗಿನ ಮರಗಳು, ಅಡಿಕೆ ಸಸಿ, ಕಬ್ಬು ಬೇವಿನ ಮರಗಳನ್ನು ಕಟಾವು ಮಾಡಿ ತೊಂದರೆ ನೀಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ನೀಡಿದ್ದು ಉಪ ವಿಭಾಗ ಅಧಿಕಾರಿಗಳು ಸಹ ರಿಯಲ್ ಎಸ್ಟೇಟ್ ಮಾಲೀಕರ ಹೆಸರಿನಲ್ಲಿ ಯಾವುದೇ ದಾಖಲಾತಿ ಇಲ್ಲವೆಂದು ಪತ್ರ ನೀಡಿದ್ದಾರೆ. ಆದರೆ ನೂರರಿಂದ ೨೦೦ ಜನ ಪೊಲೀಸ್ ಹಾಗೂ ಅಧಿಕಾರಿಗಳು ಬಂದು ದಬ್ಬಾಳಿಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ. ಸರ್ಕಾರ ಕೂಡಲೇ ಸ್ಪಂದಿಸದೆ ಹೋದರೆ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಹಾಗೂ ಕುಟುಂಬದವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಬಂಡಿಹಳ್ಳಿ ಗ್ರಾಮದ ಮುಖಂಡರಾದ ಸಿ. ಎಸ್. ಚಂದ್ರಶೇಖರ್ ಮಾತನಾಡಿ, ನಮ್ಮ ತಂದೆ ಕಾಲದಿಂದಲೂ ಈ ಜಮೀನನ್ನ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಏಕಾಏಕಿ ಲಂಚದ ಆಮಿಷವೊಡ್ಡಿ ನಮ್ಮ ಜಾಗದಿಂದ ಒಕ್ಕಲು ಎಬ್ಬಿಸಿ ಜಮೀನನ್ನು ತಮ್ಮ ಕೈವಶ ಮಾಡಿಕೊಳ್ಳಲು ಜಂಬೂರು ಶ್ರೀನಿವಾಸ್, ದಿಂಡಗೂರು ತಿಮ್ಮ, ದಿಂಡಗೂರು ಕಿಟ್ಟಿ, ಕಲಸಿಂದ ಗಂಗಾ, ಚಿಕ್ಕಮಂಗಳೂರು ದೊರೆಸ್ವಾಮಿ, ವೆಂಕಟಯ್ಯ, ಮೂಡಲಯ್ಯ, ಜವರ ದಾಸಯ್ಯ, ಕೆಂಚಯ್ಯ ಗಲಾಟೆ ನಡೆಸುತ್ತಿದ್ದು ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮದ ಕಲಸಿಂದ ಮಂಜಣ್ಣ, ಚಿಕ್ಕೋನಹಳ್ಳಿ ಪ್ರಭ, ಶಂಕರೇಗೌಡ ಮತ್ತಿತರಿದ್ದರು.