ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳ ನೌಕರರು ಸರ್ಕಾರದ ಬಹುತೇಕ ಸವಲತ್ತುಗಳನ್ನು ಹಾಗೂ ಅರ್ಜಿಗಳನ್ನು ಮೊಬೈಲ್ ಆ್ಯಪ್ ಮೂಲಕವೇ ಜನರಿಗೆ ತಲುಪಿಸಬೇಕಿದ್ದು, ಇದರಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದದ ಸಂಘಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಪಂಚನೌಕರರ ಸಹಯೋಗದಲ್ಲಿ ಆರ್‌ಡಿಪಿಆರ್ ಕುಟುಂಬದಿಂದ ಮಂಗಳವಾರ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ರಾಜ್ಯದ ಶೇಕಡ ೬೮ರಿಂದ ೭೦ ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿಗಳಿಂದ ಶೇಕಡ ೭೦ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯತಿಯ ಎಲ್ಲ ಸಿಬ್ಬಂದಿ ವರ್ಗ (ಪಂಚನೌಕರರು) ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಮನವಿಗಳಿಗೂ ಸ್ಪಂದಿಸಿಲ್ಲ ಎಂದರು.ಸರ್ಕಾರದ ಧೋರಣೆಗೆ ಖಂಡನೆ: ಕೇವಲ ಎಲ್ಲಾ ಸಮಸ್ಯೆಗಳಿಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇರ ಹೊಣೆಗಾರ ಮಾಡುತ್ತಿರುವ ಸರ್ಕಾರ ಮತ್ತು ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟವನ್ನು ಪ್ರಾರಂಭಿಸಿದ್ದು, ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹೋರಾಟ ನಡೆಸಿದರೂ ಸರ್ಕಾರ ಸಮಸ್ಯೆಗೆ ಸ್ಪಂದನೆ ಮಾಡಿಲ್ಲ. ಹಾಗಾಗಿ ರಾಜ್ಯದ ಎಲ್ಲ ಜಿಪಂಗಳ ಮುಂದೆ ಪಿಡಿಒಗಳು, ಗ್ರಾಪಂ ಅದ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗು ಎಲ್ಲಾ ಸಿಬ್ಬಂದಿ ಹೋರಾಟ ಆರಂಭಿಸಿದ್ದಾರೆ, ಹಾಸನ ಜಿಲ್ಲೆಯಲ್ಲೂ ಕೂಡ ಹೋರಾಟ ಬೆಂಬಲಿಸಿ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಮನೋಹರನ್ ಮಾಧ್ಯಮದೊಂದಿಗೆ ಮಾತನಾಡಿ, ಪಂಚನೌಕರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ, ಬೇಡಿಕೆಗಳು ಈಡೇರುವವರೆಗೆ ಈ ಹೋರಾಟ ಅನಿರ್ದಿಷ್ಟ ಅವಧಿವರೆಗೆ ಮುಂದುವರಿಯುವುದು ಎಂದರು. ಕಂಪ್ಯೂಟರ್ ಆಪರೇಟರ್ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ಮಾತನಾಡಿ, ರಾಜ್ಯದ ಎಲ್ಲಾ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸಬೇಕು. ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ವಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡುವುದು ಹಾಗೂ ಜಿಲ್ಲೆಯಲ್ಲಿ ಸ್ವಹಿಚ್ಛೆ ಇಲ್ಲದ ಸಾರ್ವಜನಿಕ ಹಿತಾಸಕ್ತಿ ಹಿತದೃಷ್ಟಿ ತೋರದೆ ವರ್ಗಾವಣೆ ಮಾಡಬಾರದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಮುನ್ನ ಸಂಘದ ಸಲಹೆಯನ್ನು ಪಡೆಯುವುದು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ, ಬಡ್ತಿ ನೀಡಲು ಕ್ರಮಕೈಗೊಳ್ಳಬೇಕು.
ಗ್ರಾಮ ಪಂಚಾಯಿತಿಯ ಪಂಚ ನೌಕರುಗಳಿಗೆ ವೇತನ ಶ್ರೇಣಿ ಮತ್ತು ಸೇವಾ ಹಿರಿತನದ ವೇತನವನ್ನು ಜಾರಿ ಮಾಡಿ ಕಾರ್ಮಿಕ ಇಲಾಖೆಯ ವೇತನವನ್ನು ಹೊರತುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ವಂಚಾಯತ್ ರಾಜ್ ಇಲಾಖೆಯಿಂದಾನೆ ವೇತನ ನಿಗದಿಪಡಿಸಿ ನೌಕರರ ಖಾತೆಗಳಿಗೆ ಸಂಬಳವನ್ನು ಪಾವತಿ ಮಾಡಬೇಕೆಂದರು.ಸ್ವಚ್ಛತಾಗಾರರಿಗೆ ಸ್ವಚ್ಛತೆ ಮಾಡುವಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಆದೇಶ ಮಾಡುವುದು. ಗ್ರಾಮ ಪಂಚಾಯತ್ ಕರವಸೂಲಿಗಾರರು ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿಂದ ಸೇವೆ ಒಳಗಿನ ನೇರ ನೇಮಕಾತಿಗೆ ಎಸ್.ಡಿ.ಎ.ಎ. ವೃಂದಕ್ಕೆ ಪದೋನ್ನತಿ ಹೊಂದಲು ೭೫% ರಷ್ಟು ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಇದೇ ವೇಳೆ ಸಂಘದ ರಾಜ್ಯ ಮಾಜಿ ಉಪಾಧ್ಯಕ್ಷ ನಟರಾಜು, ತಾಲೂಕು ಅಧ್ಯಕ್ಷ ನಂಜಪ್ಪ, ಸಿ.ಎಸ್. ಶಿವಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.