ಚಂದಗಾಲು ಗ್ರಾಮದಲ್ಲಿ ಎಸ್ಪಿ ನೇತೃತ್ವದಲ್ಲಿ ಗ್ರಾಮಗಸ್ತು ಸದಸ್ಯರ ಸಭೆ

| Published : Feb 17 2025, 12:33 AM IST

ಚಂದಗಾಲು ಗ್ರಾಮದಲ್ಲಿ ಎಸ್ಪಿ ನೇತೃತ್ವದಲ್ಲಿ ಗ್ರಾಮಗಸ್ತು ಸದಸ್ಯರ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಬೀಟ್ ಸಿಬ್ಬಂದಿಯವರಿಗೆ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕರುಗಳಿಗೆ ಮಾಹಿತಿ ನೀಡಬೇಕು. ಯಾವುದೇ ತುರ್ತು ಸಂದರ್ಭಗಳಲ್ಲಿ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಗಾಲು ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಗ್ರಾಮಗಸ್ತು ಸದಸ್ಯರ ಸಭೆ ನಡೆಯಿತು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲಾದಂಡಿ ಮಾತನಾಡಿ, ಗ್ರಾಮದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಬೀಟ್ ಸಿಬ್ಬಂದಿಯವರಿಗೆ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕರುಗಳಿಗೆ ಮಾಹಿತಿ ನೀಡಬೇಕು. ಯಾವುದೇ ತುರ್ತು ಸಂದರ್ಭಗಳಲ್ಲಿ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿದರೆ 10 ರಿಂದ 15 ನಿಮಿಷದೊಳಗಾಗಿ ಸ್ಥಳದಲ್ಲಿ ಹಾಜರಿದ್ದು ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಮಂಡ್ಯ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಎಲ್.ಕೆ ರಮೇಶ್, ಕೆರಗೋಡು ವೃತ್ತ ನಿರೀಕ್ಷಕ ಎನ್ .ವಿ.ಮಹೇಶ್ ಸೇರಿದಂತೆ ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್ , ಚಂದಗಾಲು, ಕುರಿಕೊಪ್ಪಲು. ವಡ್ಡರಹಳ್ಳಿಕೊಪ್ಪಲು ಗ್ರಾಮದ ಮುಖಂಡರು, ಗ್ರಾಮಸ್ಥರು, ಗ್ರಾಮ ಗಸ್ತು ಸದಸ್ಯರು ಇದ್ದರು.

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದ ಹಿನ್ನೆಲೆ ತಹಸೀಲ್ದಾರ್‌ಗಳಿಂದ ಅರ್ಜಿ ಸ್ವೀಕಾರ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವುದರಿಂದ ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ, ಉದ್ಯೋಗಾಂಶಗಳಿಗೆ ಹಾಗೂ ವಿವಿಧ ಕ್ಷೇತ್ರ ಪರೀಕ್ಷಾರ್ಥಿಗಳಿಗೆ ಅಡಚಣೆ ಉಂಟಾಗಿದೆ.

ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್‌ನಲ್ಲಿ ಕ್ಷೇತ್ರ ಪರಿಶೀಲನೆಗೆ ಬಾಕಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಕೋರಿಕೆಯ ಅರ್ಜಿಗಳನ್ನು ಹಾಗೂ ಮುಂದೆ ಸ್ವಿಕೃತವಾಗುವ ಹೊಸ ಅರ್ಜಿಗಳನ್ನು ರಾಜಸ್ವ ನಿರೀಕ್ಷಕರು ಕ್ಷೇತ್ರ ತಪಾಸನೆಯನ್ನು ನಡೆಸಿ ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರಗಳನ್ನು ವಿತರಿಸಲು ಜಿಲ್ಲೆಯ ಎಲ್ಲಾ ತಹಸೀಲ್ದಾರಾರಿಗೆ ತಿಳಿಸಲಾಗಿದೆ.

ಸಾರ್ವಜನಿಕರು ಆಯಾ ತಾಸಿಲ್ದಾರರನ್ನು ಸಂಪರ್ಕಿಸಿ ಜಾತಿ, ಆದಾಯ ಪತ್ರ, ವಾಸಸ್ಥಳ ದೃಢೀಕರಣ ಪತ್ರಗಳನ್ನು ಸ್ವೀಕರಿಸಬಹುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಸ್ವೀಕರಿಸಲು ಯಾವುದೇ ರೀತಿಯ ಅಡಚಣೆಗಳು ಉಂಟಾದಲ್ಲಿ ಮೊ- 8277862938 ಅನ್ನು ಸಂಪರ್ಕಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಮಂಡ್ಯ:

ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ನೀಡಲಾಗುತ್ತಿರುವ ಶುಲ್ಕ ಮರುಪಾವತಿ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.15 ಕೊನೆ ದಿನವಾಗಿತ್ತು. ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲು ಮನವಿ ಮಾಡಿದ್ದರಿಂದ ವೃತ್ತಿಪರ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಸ್ನಾತಕೋತರ ಪದವಿ ಮತ್ತು ನರ್ಸಿಂಗ್ ಕೋರ್ಸ್ ಗಳಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 10ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.