ತನ್ನ ಮಗುವನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ಗ್ರಾಪಂ ಅಧ್ಯಕ್ಷೆ

| Published : Feb 18 2025, 12:31 AM IST

ಸಾರಾಂಶ

ಅಡಿಟರ್‌ ವೃತ್ತಿಯಲ್ಲಿ ನಿರತರಾಗಿದ್ದ ಗೋಪಾಲ ಕೃಷ್ಣ ತಾಲೂಕಿನ ಗುಂಡಾರ್ಲಹಳ್ಳಿಯ ವಾಸಿಯಾಗಿದ್ದು ತಮ್ಮ ಪತ್ನಿ ಶೃತಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬ ಸಮೇತ ಬೆಂಗಳೂರಿನ ಬಾಗಲಕುಂಟೆಯಲ್ಲಿ ವಾಸವಾಗಿದ್ದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಬ್ಯಾಡನೂರು ಗ್ರಾಪಂ ಅಧ್ಯಕ್ಷೆಯೊಬ್ಬರು ತನ್ನ 5 ವರ್ಷದ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ಭಾನುವಾರ ರಾತ್ರಿ ಬೆಂಗಳೂರು ಬಾಗಲಗುಂಟೆಯ ವ್ಯಾಪ್ತಿಯ ರಾಮಯ್ಯ ಲೇಔಟ್‌ನಲ್ಲಿ ನಡೆದಿದ್ದು, ಈ ಘಟನೆ ಕುರಿತು ವಿಷಯ ತಿಳಿಯುತ್ತಿದ್ದಂತೆ ಪಾವಗಡ ತಾಲೂಕಿನ ರಾಜಕೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ಅತ್ಯಂತ ಅಚ್ಚರಿ ವ್ಯಕ್ತವಾಗಿದೆ.

5 ವರ್ಷದ ಮಗಳು ರೋಶಿಣಿ ಕೊಂದು ಶೃತಿ (33) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪಾವಗಡ ತಾಲೂಕು ಗುಂಡಾರ್ಲಹಳ್ಳಿ ಗ್ರಾಮದ ವಾಸಿಯಾದ ಆಡಿಟರ್ ಗೋಪಾಲಕೃಷ್ಣ ಎನ್ನುವರು ಕಳೆದ 10 ವರ್ಷದ ಹಿಂದೆ ಜಿಲ್ಲೆಯ ಶಿರಾ ತಾಲೂಕಿನ ಗ್ರಾಮವೊಂದರ ಶೃತಿ ಎನ್ನುವರನ್ನು ವಿವಾಹವಾಗಿದ್ದರು. ಅಡಿಟರ್‌ ವೃತ್ತಿಯಲ್ಲಿ ನಿರತರಾಗಿದ್ದ ಗೋಪಾಲ ಕೃಷ್ಣ ತಾಲೂಕಿನ ಗುಂಡಾರ್ಲಹಳ್ಳಿಯ ವಾಸಿಯಾಗಿದ್ದು ತಮ್ಮ ಪತ್ನಿ ಶೃತಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬ ಸಮೇತ ಬೆಂಗಳೂರಿನ ಬಾಗಲಕುಂಟೆಯಲ್ಲಿ ವಾಸವಾಗಿದ್ದರು.

ಇದೇ ಫೆ. 16ರಂದು ರಾತ್ರಿ 5 ವರ್ಷದ ರೋಹಿಣಿ ಎನ್ನುವ ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು ಬೆಂಗಳೂರಿನಲ್ಲಿ ವಾಸವಿದ್ದ ಗಂಡ ಬೇರೆ ಮಹಿಳೆಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದರೆನ್ನಲಾದ ವಿಚಾರದ ಹಿನ್ನೆಲೆಯಲ್ಲಿ ಬೇಸತ್ತ ಶುೃತಿ ಬೆಂಗಳೂರಿನ ತನ್ನ ವಾಸದ ಮನೆಯಲ್ಲಿ 5 ವರ್ಷದ ಮಗಳನ್ನು ನೇಣು ಹಾಕಿ ಸಾಯಿಸಿ, ಬಳಿಕ ಆಕೆ ಸಹ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಗುಂಡಾರ್ಲಹಳ್ಳಿಯ ಶೃತಿ ಹಾಲಿ ಬ್ಯಾಡನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಗ್ರಾಪಂ ಅಭಿವೃದ್ಧಿಯ ಅತ್ಯುತ್ತಮವಾದ ಸೇವೆ ಸಲ್ಲಿಸುವ ಮೂಲಕ ಉತ್ತಮ ಹೆಸರು ಗಳಿಸಿದ್ದರು. ಘಟನೆ ಕುರಿತು ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ. 17ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ, ಶಿರಾ ತಾಲೂಕು ಗುಳಗೇನಹಳ್ಳಿಯಲ್ಲಿ ಶವಸಂಸ್ಕಾರ ನೆರೆವೇರಿಸಿರುವುದಾಗಿ ತಿಳಿದುಬಂದಿದೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ವೆಂಕಟರಮಣಪ್ಪ ಘಟನೆ ಕುರಿತು ಅತ್ಯಂತ ಕಳವಳ ವ್ಯಕ್ತಪಡಿಸಿದ್ದು, ಇದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಭಗವಂತ ಶಾಂತಿ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

ಶಾಸಕ ಎಚ್‌.ವಿ.ವೆಂಕಟೇಶ್‌, ಪುರಸಭೆ ಅಧ್ಯಕ್ಷ ಪಿ.ಎಚ್‌.ರಾಜೇಶ್‌, ಪುರಸಭೆ ಸದಸ್ಯ ತೆಂಗಿನಕಾಯಿ ರವಿ ಇತರೆ ಅನೇಕ ಮಂದಿ ಗಣ್ಯರು ಹಾಗೂ ಬ್ಯಾಡನೂರು ಗ್ರಾಪಂ ವ್ಯಾಪ್ತಿಯ ಸದಸ್ಯರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಹಾಗೂ ಗ್ರಾಪಂ ಪಿಡಿಒ ಸಿಬ್ಬಂದಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಫೋಟೋ 17ಪಿವಿಡಿ1

ಬ್ಯಾಡನೂರು ಗ್ರಾಪಂ ಅಧ್ಯಕ್ಷೆ ಶೃತಿ