ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ಸಿ. ಲಕ್ಕಲಹಳ್ಳಿ ಗ್ರಾಮದಲ್ಲಿ ಶನಿವಾರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಗ್ರಾಮ ಘಟಕದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.ಸಮಾವೇಶ ಉದ್ಘಾಟಿಸಿ ಮಾತನಾಡಿದ ಫೆಡರೇಷನ್‌ನ ಜಿಲ್ಲಾ ಸಹ ಸಂಚಾಲಕ ವಿ. ದೇವಣ್ಣ, ಕಟ್ಟಡ ಕಾರ್ಮಿಕರು ಸಂಘಟಿತರಾಗಬೇಕಿದೆ. ದೇಶದಲ್ಲಿ ನಿರ್ಮಾಣ ವಲಯವು ತೀವ್ರವಾಗಿ ಬೆಳವಣಿಗೆಯಾಗುತ್ತಿದೆ. ಲಕ್ಷಾಂತರ ಕಾರ್ಮಿಕರು ಅಪಾಯ ಸನ್ನಿವೇಶ ಹಾಗೂ ಸುರಕ್ಷತೆ ಇಲ್ಲದಂತಹ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರೆಯುವ ಪಿಂಚಣಿ, ಕುಟುಂಬ ಪಿಂಚಣಿ, ಅಂತ್ಯಕ್ರಿಯೆ ವೆಚ್ಚ, ವೈದ್ಯಕೀಯ, ಶೈಕ್ಷಣಿಕ ಸಹಾಯ ಧನ, ತಾಯಿ ಮಗುವಿನ ಸಹಾಯ ಹಸ್ತ, ಅಪಘಾತ ಪರಿಹಾರ ಮುಂತಾದ ಸೌಲಭ್ಯಗಳನ್ನು ಕಾರ್ಮಿಕರು ಸಂಘಟಿತ ಹೋರಾಟದಿಂದ ಪಡೆದುಕೊಳ್ಳಬೇಕು ಎಂದರು.
ಕಲ್ಯಾಣ ಮಂಡಳಿಯ ನಿಧಿ ದುರುಪಯೋಗದ ವಿರುದ್ಧ ಮತ್ತು ಹೈಕೋರ್ಟ್ ತೀರ್ಪಿನಂತೆ ಶೈಕ್ಷಣಿಕ ಸಹಾಯಧನ ವಿತರಿಸಲು ಒತ್ತಾಯಿಸಿ ಸೆ.೨೨ರಂದು ಸಂಡೂರಿನಲ್ಲಿಯ ಕಾರ್ಮಿಕ ಇಲಾಖೆಯ ಮುಂದೆ ಹಮ್ಮಿಕೊಂಡಿರುವ ಹೋರಾಟದಲ್ಲಿ ಸಂಘಟನೆಯ ಎಲ್ಲಾ ಸದಸ್ಯರು ಭಾಗವಹಿಸಿ, ಹೋರಾಟ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಫೆಡರೇಷನ್ ತಾಲೂಕು ಸಂಚಾಲಕ ಸಿಡಿ. ಹಾಲಸ್ವಾಮಿ, ಹುಚ್ಚೇನಹಳ್ಳಿ ಘಟಕದ ಅಧ್ಯಕ್ಷ ಕೆ. ದುರ್ಗಪ್ಪ ಮಾತನಾಡಿದರು. ಸಮಾವೇಶದಲ್ಲಿ ಫೆಡರೇಷನ್‌ನ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಘಟಕದ ನೂತನ ಪದಾಧಿಕಾರಿಗಳು:ರಾಜೇಶ್ (ಅಧ್ಯಕ್ಷ), ಕೆ. ಹನುಮಂತಪ್ಪ, ಗವಿಸಿದ್ದಪ್ಪ (ಉಪಾಧ್ಯಕ್ಷರು), ಕೆ. ಚಂದ್ರಶೇಖರ್ (ಕಾರ್ಯದರ್ಶಿ), ಗಂಗಾಧರ ಹಾಗೂ ವೆಂಕಟೇಶ್ (ಸಹ ಕಾರ್ಯದರ್ಶಿಗಳು), ರಾಜಪ್ಪ (ಖಜಾಂಚಿ) ಹಾಗೂ ೯ ಜನ ಸದಸ್ಯರು.