ಗೋಪಿನಾಥಂ ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ ಎಂದು ಗ್ರಾಮಸ್ಥರು ಚಾಮರಾಜನಗರ ಜಿಲ್ಲಾಡಳಿತಕ್ಕೆ ಮನವಿ

| Published : Aug 09 2024, 12:31 AM IST

ಗೋಪಿನಾಥಂ ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ ಎಂದು ಗ್ರಾಮಸ್ಥರು ಚಾಮರಾಜನಗರ ಜಿಲ್ಲಾಡಳಿತಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಪಂ ವ್ಯಾಪ್ತಿಗೆ ಸೇರಿದ ಆಲಂಬಾಡಿ, ಮಾರಿಕೊಟ್ಟಾಯಿ, ಜಂಬೂಟಪಟ್ಟಿ ಹಾಗೂ ಪೂಂಗೋಂಬು ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಪಂ ವ್ಯಾಪ್ತಿಗೆ ಸೇರಿದ ಆಲಂಬಾಡಿ, ಮಾರಿಕೊಟ್ಟಾಯಿ, ಜಂಬೂಟಪಟ್ಟಿ ಹಾಗೂ ಪೂಂಗೋಂಬು ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು.

ಈ ಗ್ರಾಮಗಳಲ್ಲಿ ಸುಮಾರು 450 ಮನೆಗಳಿದ್ದು, ಇದರಲ್ಲಿ 100 ಕುಟುಂಬಗಳು ಪರಿಶಿಷ್ಟ ಪಂಗಡ ಹಾಗೂ 35 ಕುಟುಂಬಗಳು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು ವಾಸವಾಗಿದ್ದಾರೆ. ಸುಮಾರು 70-80 ವರ್ಷಗಳಿಂದ ಇದೇ ಪ್ರದೇಶದಲ್ಲಿ ನೆಲೆಸಿದ್ದು ವ್ಯವಸಾಯವನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದರಿಂದ ಗ್ರಾಮಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳನ್ನು ಮಾಡಿಸಿಲ್ಲ. ಆದ್ದರಿಂದ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣ ನಮ್ಮ ಮೇಲೆ ದಾಖಲಾಗಿದೆ. ಅರಣ್ಯ ಕಾಯ್ದೆಗಳಿಂದ ನಮಗೆ ಸಿಗಬೇಕಾದ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಕರ್ಯಗಳು ಸಿಗದೆ ಕಷ್ಟದ ಜೀವನ ಸಾಗಿಸುತ್ತಿದ್ದೇವೆ ಎಂದರು.

ಗೋಪಿನಾಥಂ ವಲಯ ಅರಣ್ಯಾಧಿಕಾರಿಗಳು ನಮ್ಮ ಗ್ರಾಮದ ಜಮೀನುಗಳನ್ನು ತೆರವುಗೊಳಿಸಲು ನೋಟಿಸ್ ನೀಡುತ್ತಿದ್ದು, ಕೆಲವೇ ದಿನಗಳಲ್ಲಿ ಜಮೀನು ಹಾಗೂ ಮನೆಗಳನ್ನು ಬಿಟ್ಟುಕೊಡಲು ತಿಳಿಸಿದ್ದಾರೆ. ನಮ್ಮನ್ನು ಇತರೆ ಪಾರಂಪರಿತ ಅರಣ್ಯವಾಸಿಗಳೆಂದು ಪರಿಗಣಿಸಿ ವಾಸಿಸಲು ಹಕ್ಕುಪತ್ರ ನೀಡಬೇಕು ಹಾಗೂ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬೋಟಿಂಗ್ ಅಧ್ಯಕ್ಷ ರತ್ನವೇಲು ಅಲಂಬಾಡಿ, ಪೆರುಮಾಳ್, ಪಳನಿಸ್ವಾಮಿ, ಮಾದಯ್ಯ, ತಂಗವೇಲು ಹಾಜರಿದ್ದರು.