ಸಾರಾಂಶ
ಶಿಗ್ಗಾಂವಿ: ತಾಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ವೃದ್ಧೆಯೊಬ್ಬರ ಶವವನ್ನು ರಾಷ್ಟ್ರೀಯ ಹೆದ್ದಾರಿಗೆ ತಂದು ಅಂತ್ಯಕ್ರಿಯೆಗೆ ಮುಂದಾದ ಘಟನೆ ಮಂಗಳವಾರ ನಡೆಯಿತು. ಬಿಸನಹಳ್ಳಿ ಗ್ರಾಮದಲ್ಲಿ ಯಾರೇ ನಿಧನರಾದವರೂ ಶವಸಂಸ್ಕಾರ ಮಾಡಲು ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿ ಪರಿಮಿಣಿಸಿದೆ. ಕೆಲ ದಿನಗಳ ಹಿಂದೆ ಹೆದ್ದಾರಿ ಮೇಲೆಯೇ ಶವಸಂಸ್ಕಾರ ಮಾಡಿ ತಮ್ಮ ಅಕ್ರೋಶ ಹೊರಹಾಕಿದ್ದರು. ಆಗ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರರು ಶೀಘ್ರ ಸ್ಮಶಾನ ನಿರ್ಮಾಣದ ಭರವಸೆ ನೀಡಿದ್ದರೂ ಇದುವರೆಗೂ ಸ್ಮಶಾನ ಭೂಮಿಯ ಸಮಸ್ಯೆ ಪರಿಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಶವಸಂಸ್ಕಾರಕ್ಕೆ ಮುಂದಾಗಿದ್ದರು.ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಟ್ಟಿಗೆ ಹೊಂದಿಸಿಟ್ಟು ಅಲ್ಲಿಯೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಗ್ರಾಮದಲ್ಲಿಯೇ ಸ್ಮಶಾನಕ್ಕೆ ಜಾಗ ಗುರುತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಳಿಕ ಗ್ರಾಮಸ್ಥರು ಹೆದ್ದಾರಿಯ ಸರ್ವೀಸ್ ರಸ್ತೆಯ ಸಮೀಪದಲ್ಲಿರುವ ಚಾಕಾಪುರ ರಸ್ತೆಬದಿ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದರು. ಗ್ರಾಮದ ವೃದ್ಧೆ ಯಲ್ಲಮ್ಮ ಮಹಾದೇವಪ್ಪ ಮಡಿವಾಳರ (೯೦) ಅವರು ನಿಧನರಾಗಿದ್ದರು. ಅವರಿಗೆ ಗ್ರಾಮದಲ್ಲಿ ಸ್ವಂತ ಜಮೀನು ಇಲ್ಲ. ಗ್ರಾಮದಲ್ಲಿ ರುದ್ರಭೂಮಿಯೂ ಇಲ್ಲ. ಹೀಗಾಗಿ ಅವರ ಅಂತ್ಯಸಂಸ್ಕಾರ ಎಲ್ಲಿ ಮಾಡಬೇಕೆಂಬುದು ತೋಚಲಿಲ್ಲ. ಅದೇ ಕಾರಣಕ್ಕೆ, ವೃದ್ಧೆಯ ಶವವನ್ನು ಹೆದ್ದಾರಿಗೆ ತಂದಿದ್ದೆವು ಎಂದು ಗ್ರಾಮಸ್ಥರು ತಿಳಿಸಿದರು.ಟ್ರ‍್ಯಾಕ್ಟರ್‌ನಲ್ಲಿ ಕಟ್ಟಿಗೆಗಳನ್ನು ತಂದು ಹೆದ್ದಾರಿಯಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗುತ್ತಿತ್ತು. ಅಷ್ಟರಲ್ಲಿ ತಹಸೀಲ್ದಾರ್ ಸ್ಥಳಕ್ಕೆ ಬಂದು ಸ್ಮಶಾನಕ್ಕೆ ಜಾಗ ಗುರುತಿಸುವುದಾಗಿ ಭರವಸೆ ನೀಡಿದರು ಎಂದರು.
ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಲು ಕೆಲವರು ಒಪ್ಪಿಕೊಂಡಿದ್ದಾರೆ. ಆದರೆ, ಅವರಿಗೆ ಕಡಿಮೆ ದರ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಹೀಗಾಗಿ ಅವರು ಜಾಗ ನೀಡುತ್ತಿಲ್ಲ. ಕಂದಾಯ ಇಲಾಖೆಯವರು ಭೂಮಾಲೀಕರ ಮನವಿಯಂತೆ ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸಬೇಕು. ಅದನ್ನೇ ಸ್ಮಶಾನಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಗಂಗಣ್ಣ ಸವಣೂರ, ಉಮೇಶ ಅಂಗಡಿ, ವೀರೇಶ ಆಜೂರ, ಕಲ್ಲಪ್ಪ ಆಜೂರ, ಸೋಮ ಶೇಖರ ಆಜೂರ, ಪ್ರವೀಣ ಆಜೂರ, ಚಂದ್ರಶೇಖರ ಸದಾಶಿವಪೇಟೆಮಠ, ವೀರಬಸಪ್ಪ ಸವಣೂರ, ಚೇತನ ಮಡಿವಾಳರ, ನಾಗರಾಜ ಮಡಿವಾಳರ ಇದ್ದರು.