ಐಕನಹಳ್ಳಿಗೆ ಬಸ್ ಸಂಪರ್ಕ ಕಲ್ಪಿಸಿದ ಶಾಸಕರಿಗೆ ಗ್ರಾಮಸ್ಥರ ಅಭಿನಂದನೆ

| Published : Mar 28 2025, 12:32 AM IST

ಸಾರಾಂಶ

ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯ ನಿಗದಿತ ವೇಳೆಗೆ ತರಗತಿಗಳಿಗೆ ಹಾಜರಾಗದೆ ಪರಿತಪಿಸುತ್ತಿದ್ದರು. ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗಳಿಗೆ ಹೋಗಲು ಸಮಸ್ಯೆ ಕಾಡುತ್ತಿತ್ತು. ಎಲ್ಲವನ್ನೂ ತಿಳಿದು ನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಬಸ್ ಓಡಾಡುವ ವ್ಯವಸ್ಥೆ ಮಾಡಲಾಗಿದೆ.

ಕಿಕ್ಕೇರಿ: ಗಡಿಭಾಗ ಐಕನಹಳ್ಳಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿದ ಶಾಸಕ ಎಚ್.ಟಿ. ಮಂಜು ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.

ಕೆ.ಆರ್.ಪೇಟೆ ತಾಲೂಕು ಕೇಂದ್ರದಿಂದ ನಿತ್ಯ ಓಡಾಡಲು ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕರು ಮಾತನಾಡಿ, ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದೆ ಜನರು, ವಿದ್ಯಾರ್ಥಿಗಳಿಗೆ ತೊಡಕಾಗಿತ್ತು. ಸುಮಾರು 2 ಕಿಮೀ ಕಾಲ್ನಡಿಗೆಯಲ್ಲಿ ನಡೆದು ಬಸ್‌ಗಾಗಿ ಐಕನಹಳ್ಳಿ ಕ್ರಾಸ್‌ಗೆ ಬರಬೇಕಿತ್ತು ಎಂದರು. ಕೆ.ಆರ್.ಪೇಟೆ, ಕಿಕ್ಕೇರಿ, ಐಕನಹಳ್ಳಿ, ಸಾಸಲು ಮಾರ್ಗವಾಗಿ ಶ್ರವಣಬೆಳಗೊಳಕ್ಕೆ ನಿತ್ಯ ಬಸ್ ಸಂಚರಿಸಲಿದೆ. ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಗ್ರಾಮಸ್ಥರು, ವಿದ್ಯಾರ್ಥಿಗಳು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯ ನಿಗದಿತ ವೇಳೆಗೆ ತರಗತಿಗಳಿಗೆ ಹಾಜರಾಗದೆ ಪರಿತಪಿಸುತ್ತಿದ್ದರು. ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗಳಿಗೆ ಹೋಗಲು ಸಮಸ್ಯೆ ಕಾಡುತ್ತಿತ್ತು. ಎಲ್ಲವನ್ನೂ ತಿಳಿದು ನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಬಸ್ ಓಡಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಬಸ್ ಸೇವೆ ಉಳಿಯಬೇಕು ಎಂದರೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ಪ್ರಯಾಣಿಸಬೇಕಿದೆ. ವರಮಾನವಿಲ್ಲದೆ ಬಸ್‌ಗಳ ಓಡಾಟ, ನಿರ್ವಹಣೆ ಆದಾಯವಿಲ್ಲದೆ ನಷ್ಟವಾಗಲಿದೆ ಎಂಬುದನ್ನು ಅರಿತು ಬಸ್ ಸೇವಾ ಸೌಲಭ್ಯ ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಅಂಬುಜಾ ಉದಯಶಂಕರ್, ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಮುಖಂಡರಾದ ರಾಮೇಗೌಡ, ಕಾಂತರಾಜು, ಶಿವರಾಂ, ಗ್ರಾಪಂ ಸದಸ್ಯರು ಇದ್ದರು.