ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಕ್ಷೇತ್ರದ ಸರ್ವಾಂಗೀಣ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಎರಡು ಸಾವಿರ ಕೋಟಿ ಅನುದಾನ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ ದೊಡ್ಡಿ

ಮದ್ದೂರು ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲೂ ಕಳೆದ ಮೂರು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲೂ ಸರ್ಕಾರದಿಂದ ಇನ್ನಷ್ಟು ಅನುದಾನ ತಂದು ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಕೆ.ಎಂ.ದೊಡ್ಡಿ ಸಮೀಪದ ಓಂ ಶಾಂತಿ ಮಾರ್ಗ, ಯಲಾದಹಳ್ಳಿ ಹಾಗೂ ಮಡೇನಹಳ್ಳಿ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಕ್ಷೇತ್ರದ ಸರ್ವಾಂಗೀಣ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಎರಡು ಸಾವಿರ ಕೋಟಿ ಅನುದಾನ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಸಿಎಂ ಇದಕ್ಕೆ ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದರು.

ಗ್ರಾಮದ ಅಭಿವೃದ್ಧಿ ವಿಚಾರಾದಲ್ಲಿ ಜನರು ಪಕ್ಷಾತೀತ, ಜಾತ್ಯತೀತವಾಗಿ ಅಭಿವೃದ್ಧಿಗೆ ಸಹಕರಿಸಬೇಕು. ಯಾವುದೇ ಕೆಲಸಗಳು ಆಗಲು ಗ್ರಾಮಸ್ಥರು ಒಕ್ಕೊರಲಿನಿಂದ ಸಹಕಾರ ನೀಡಬೇಕು. ಆಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಮದ್ದೂರು ಇಡೀ ರಾಜ್ಯದಲ್ಲೇ ಹೆಚ್ಚಿನ ಅನುದಾನ ತಂದು ಸದ್ಬಳಕೆಯಾಗಿರುವ ಕ್ಷೇತ್ರವಾಗಿದೆ. ನಿರೀಕ್ಷೆಗೂ ಮೀರಿ ಅನುದಾನ ಬಿಡುಗಡೆಯಾಗಿದೆ. ನೀರಾವರಿ, ಕಾಲುವೆಗಳ ಅಧುನೀಕರಣ, ವಿದ್ಯುತ್, ಕುಡಿಯುವ ನೀರು, ಆರೋಗ್ಯ, ಗ್ರಾಮೀಣ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಯೋಜನೆಗಳು ಹಾಗೂ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಕಾಯಕಲ್ಪ ನೀಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿದೆ ಎಂದರು.

ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಪಿಡಿಒ ಸುಧಾ, ಗ್ರಾಪಂ ಮಾಜಿ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಪುಟ್ಟರಾಮು, ಶ್ರೀನಿವಾಸ್ ಕುಳ್ಳಪ್ಪ, ಮುಖಂಡರಾದ ದಾಸೆಗೌಡ ಪೂಜಾರಿ ಮಹೇಶ್, ಮರಿಸ್ವಾಮಿ, ದಾಸೇಗೌಡ, ಉಮೇಶ್, ಎಲ್‌ಐಸಿ ಶಿವಣ್ಣ, ಗೀತಾಕುಮಾರಿ, ವಸಂತಮ್ಮ, ವಿ.ಸಿ.ಮೌಲಿ, ಯಲಾದಹಳ್ಳಿ ಬೋರೇಗೌಡ, ಮಡೇನಹಳ್ಳಿ ಸಿದ್ದಲಿಂಗ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.