ಶಿರಹಟ್ಟಿ: ತಾಲೂಕಿನ ಕಡಕೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ್ಲಿಗೇರಿ ಗ್ರಾಮದಲ್ಲಿ ಕಳೆದ ೧೫ ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದೇ ಇರುವುದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮಂಗಳವಾರ ಖಾಲಿ ಕೊಡಗಳೊಂದಿಗೆ ಕಡಕೋಳ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನಾನಿರತರು ಮಾತನಾಡಿ, ಬೇಸಿಗೆ ಆರಂಭಕ್ಕೂ ಮುನ್ನವೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕಳೆದ ೧೫ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪಿಡಿಒ ಹಾಗೂ ಪಂಚಾಯಿತಿಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಅಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆ ತಿಳಿಸಿದರೂ ಗ್ರಾಮಸ್ಥರ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿದರು.ಬೇಸಿಗೆ ಇನ್ನೂ ಅರಂಭವಾಗಿಲ್ಲ. ಈಗಲೇ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಬಿರುಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗೆ ಅಧಿಕಾರಿಗಳು ಸೂಕ್ತ ಪರಿಹಾರ ಕಂಡುಕೊಳ್ಳದೇ ಜನರ ಜೀವ ಹಿಂಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಎದುರು ನೀರಿಗಾಗಿ ಗೋಗರೆದರೂ ಅಧಿಕಾರಿಗಳಿಂದ ಸ್ಪಂದನೆ ಸಿಗದೇ ಇರುವುದರಿಂದ ಸ್ಥಳದಲ್ಲಿ ಕೆಲಹೊತ್ತು ಧರಣಿ ಕುಳಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿಡಿಒ ವಿರುದ್ಧ ಆಕ್ರೋಶ ಹೊರಹಾಕಿದರು.₹೧೬ ಲಕ್ಷ ಖರ್ಚಾದರೂ ಹನಿ ನೀರಿಲ್ಲ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜೆಜೆಎಂ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಜಲ್ಲಿಗೇರಿ ಗ್ರಾಮದ ಜನರ ಪಾಲಿಗೆ ಶಾಪವಾಗಿದೆ. ಗುತ್ತಿಗೆ ಪಡೆದವರು ಅಪೂರ್ಣ ಕಾಮಗಾರಿ ಮಾಡಿ ₹೧೬ ಲಕ್ಷ ಹಣ ನುಂಗಿದ್ದಾರೆ. ಈ ಹಿಂದೆ ಇದ್ದ ಕಡಕೋಳ ಪಿಡಿಒ ಅವರು ಕಾಮಗಾರಿ ಯಾವ ಹಂತಕ್ಕೆ ಬಂದಿದೆ ಎಂಬುದನ್ನು ಪರಿಶೀಲಿಸದೇ ಬಿಲ್ ನೀಡಿದ್ದು, ಯಾರೊಬ್ಬರ ಮನೆಗೂ ನಲ್ಲಿ ನೀರು ಬಂದಿಲ್ಲ. ಪೈಪ್ ಜೋಡಣೆ ಮಾಡದೇ ಮನೆ ಎದುರು ನಳ ಹಾಕಿ ಹೋಗಿದ್ದು, ಹನಿ ನೀರು ಕೂಡ ಬಂದಿಲ್ಲ ಎಂದು ಗಂಭೀರ ಆರೋಪ ಮಾಡಿದರು.ಕಳೆದ ಕೆಲವು ದಿನಗಳಿಂದ ಕುಡಿಯುವ ನೀರು ಬಂದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಯನ್ನು ಕೇಳಿದರೆ ಅವರು ಹತ್ತಾರು ಸುಳ್ಳಿನ ಆಶ್ವಾಸನೆಯನ್ನು ಕೊಟ್ಟು ಗ್ರಾಮಸ್ಥರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಕುಡಿತಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಇದೇ ತಿಂಗಳಲ್ಲಿ ಜಲ್ಲಿಗೇರಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಇರುವುದರಿಂದ ನೀರಿಗಾಗಿ ಹಾಹಾಕಾರ ಪಡುತ್ತಿದ್ದೇವೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಗ್ರಾಮದ ಸ್ವಚ್ಛತೆಗೆ ಹಾಗೂ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ದಿಂಗಾಲೇಶ ಹಿರೇಮಠ ಆಗ್ರಹಿಸಿದರು.ಕಡಕೋಳ ಗ್ರಾಮ ಪಂಚಾಯಿತಿ ಮುಂದೆ ಬೆಳಗ್ಗೆ ಕುಡಿಯುವ ನೀರಿಗಾಗಿ ನೂರಾರು ಸಾರ್ವಜನಿಕರು ಜಮಾಯಿಸಿ ತಮ್ಮ ಬೇಡಿಕೆ ಈಡೇರುವ ವರೆಗೆ ಸ್ಥಳ ಬಿಟ್ಟು ಹೊರಡುವುದಿಲ್ಲ ಎಂದು ಹಠ ಹಿಡಿದರು. ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಳವಾಡ ಅಗಮಿಸುತ್ತಿದ್ದಂತೆ ಜಲ್ಲಿಗೇರಿ ಗ್ರಾಮಸ್ಥರು ಕುಡಿಯುವ ನೀರು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಅವರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.ಈ ಸಂದರ್ಭದಲ್ಲಿ ಶಶಿಧರ ಸಾಳೊಂಕೆ, ಓಬಳೆಪ್ಪ ಬಳ್ಳಾರಿ, ವಿರುಪಾಕ್ಷಿ ಅಂಗಡಿ, ರವಿ ಸಾಳೊಂಕೆ, ಲಕ್ಷ್ಮಣ ಕಳಸದ, ಮಲ್ಲೇಶ ವಡ್ಡರ, ಪರಶುರಾಮ ಕಟಗಿ, ಮರಿಯಪ್ಪ ಬಳ್ಳಾರಿ, ಮಂಜು ಮ. ಕಂಬಾರ, ಮಹಾಂತೇಶ ಅಂಗಡಿ, ಮಂಜು ಕಂಬಾರ ಇತರರು ಇದ್ದರು.
ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಗ್ರಾಮಸ್ಥರ ಆಗ್ರಹ
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜೆಜೆಎಂ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಜಲ್ಲಿಗೇರಿ ಗ್ರಾಮದ ಜನರ ಪಾಲಿಗೆ ಶಾಪವಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.