ಕರಡಿ ನಿಯಂತ್ರಣಕ್ಕೆ ಗ್ರಾಮಸ್ಥರ ಆಗ್ರಹ

| Published : Jul 22 2024, 01:28 AM IST

ಸಾರಾಂಶ

ತಾಲೂಕಿನ ವದನಕಲ್ಲು ಸಮೀಪದ ದೊಡ್ಡ ಬೆಟ್ಟವೊಂದರಲ್ಲಿ ಕರಡಿಗಳ ಹಾವಳಿ

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ವದನಕಲ್ಲು ಸಮೀಪದ ದೊಡ್ಡ ಬೆಟ್ಟವೊಂದರಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಅವುಗಳ ಚೀರಾಟದಿಂದ ಗ್ರಾಮದಲ್ಲಿ ಭಯದ ವಾತವಾರಣ ಸೃಷ್ಟಿಯಾಗಿದೆ. ವದನಕಲ್ಲು ಗ್ರಾಮದಲ್ಲಿ 700ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಗ್ರಾಮದ ಪಕ್ಕದಲ್ಲಿಯೇ ದೊಡ್ಡ ಬೆಟ್ಟವಿದೆ. ಮರಗಿಡ ವ್ಯಾಪಕವಾಗಿ ಬೆಳೆದ ಹಿನ್ನಲೆಯಲ್ಲಿ ರಕ್ಷಣೆಗೆ ದೊಡ್ಡದೊಡ್ಡ ಗುಂಡುಕಲ್ಲುಗಳಿರುವ ಕಾರಣ ಬೇರೆಡೆಯಿಂದ ಆಗಮಿಸುವ ಕರಡಿಗಳು ಇಲ್ಲಿನ ಬೆಟ್ಟಗುಡ್ಡದ ಅರಣ್ಯ ಪ್ರದೇಶದಲ್ಲಿ ವಾಸವಾಗಿವೆ.

ಸಂಜೆ, ರಾತ್ರಿ ವೇಳೆ ಗುಂಪುಕಟ್ಟಿಕೊಂಡು ತೆರಳುವ ಈ ಕರಡಿಗಳು ಊರಿನ ಸಮೀಪಕ್ಕೆ ಆಗಮಿಸುತ್ತಿವೆ. ಅಲ್ಲದೇ ಬೆಟ್ಟದ ಗುಡ್ಡಗಳ ಮಧ್ಯ ಚಲ್ಲಾಟವಾಗುತ್ತಾ ಚೀರಾಡುತ್ತವೆ. ಇದನ್ನು ಕೇಳಿಸಿಕೊಂಡ ಚಿಕ್ಕಮಕ್ಕಳು ಹಾಗೂ ಮಹಿಳೆಯರು ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕರಡಿಗಳ ತಡೆಗೆ ಮುಂದಾಗುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.