ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

| Published : Jun 29 2024, 12:42 AM IST

ಸಾರಾಂಶ

ವಿಜಾಪುರ ಕೆಪಿಟಿಸಿಎಲ್‌ ವಿದ್ಯುತ್‌ ಪ್ರಸರಣಾ ಕೇಂದ್ರಕ್ಕೆ ಗ್ರಾಮಸ್ಥರು ಲಗ್ಗೆ ಇಟ್ಟು ಪ್ರತಿಭಟಿಸಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಕೆಪಿಟಿಸಿಎಲ್‌ ಎಇಇ ಜಯಣ್ಣ ಅಧಿಕಾರಿಗಳು ಮತ್ತು ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ:

ವಿಜಾಪುರ ಮತ್ತು ಸುತ್ತಲಿನ ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್‌ ಪೂರೈಕೆ ಆಗದಿರುವುದನ್ನು ಖಂಡಿಸಿ ಗ್ರಾಮಸ್ಥರು ವಿದ್ಯುತ್‌ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.

ವಿದ್ಯುತ್‌ ಸರಬರಾಜು ಆಗುವವರೆಗೆ ಯಾವುದೇ ಫೀಡರ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಕೂಡದೆಂದು ತಾಕೀತು ಮಾಡಿ, ಎಲ್ಲಾ ಫೀಡರ್‌ಗಳನ್ನು ಬಂದ್‌ ಮಾಡಿಸಿದರು. ವಿಜಾಪುರ ಮತ್ತು ಸುತ್ತಲಿನ ಗ್ರಾಮಸ್ಥರು ಕಳೆದ ಕೆಲವು ತಿಂಗಳಿನಿಂದ ತೀವ್ರ ವಿದ್ಯುತ್‌ ಕೊರತೆ ಅನುಭವಿಸುತ್ತಿದ್ದಾರೆ. ದಿನದಲ್ಲಿ ಒಂದೆರಡು ಗಂಟೆ ವಿದ್ಯುತ್‌ ಸರಬರಾಜು ಇರುವುದಿಲ್ಲ. ದಿನಕ್ಕೆ ಕನಿಷ್ಟ ೨೦ ರಿಂದ ೨೫ ಬಾರಿ ಸಂಪರ್ಕ ಕಡಿತಗೊಳ್ಳುತ್ತದೆ. ವಿದ್ಯುತ್‌ ಜಾಲ ಸರಿಯಾಗಿ ನಿರ್ವಹಿಸದೆ ಇರುವುದೇ ಇದಕ್ಕೆ ಕಾರಣವಾಗಿದೆ.

ಪದೇ ಪದೇ ವಿದ್ಯುತ್‌ ಕಡಿತದಿಂದ ಮನೆಗಳಲ್ಲಿನ ಉಪಕರಣಗಳು ಸುಟ್ಟು ಹೋದ ಘಟನೆಗಳು ನಡೆದಿವೆ. ಜಮೀನುಗಳಲ್ಲಿನ ಮೋಟಾರು ಸಹ ಇದರಿಂದ ಹೊರತಾಗಿಲ್ಲ. ಕುಡಿವ ನೀರು ಮತ್ತು ಮಕ್ಕಳ ಓದಿಗೂ ವಿದ್ಯುತ್‌ ಇಲ್ಲದಾಗಿದೆ. ಅದೆಷ್ಟೋ ರಾತ್ರಿ ವಿದ್ಯುತ್‌ ಇಲ್ಲದೆ ಕಾಲ ಕಳೆದಿದ್ದೇವೆ ಎಂದು ಗ್ರಾಮಸ್ಥರು ದೂರಿದರು.

ಎಂಎಸ್‌ಎಸ್‌ ಕೇಂದ್ರ ಸಿರಿಗೆರೆ ಬೆಸ್ಕಾಂ ವ್ಯಾಪ್ತಿಗೆ ಬರುತ್ತದೆ. ಸಮಸ್ಯೆಗಳನ್ನು ಹಲವು ತಿಂಗಳುಗಳಿಂದ ಶಾಖಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪರಿಣಾಮ ಶೂನ್ಯವಾಗಿದೆ. ಆದ್ದರಿಂದ, ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಬಗೆಹರಿಸಬೇಕು. ಸಮಸ್ಯೆ ಬಗೆಹರಿಯದವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.ಎಇಇ ಸ್ಥಳಕ್ಕೆ ಭೇಟಿ: ಗ್ರಾಮಸ್ಥರ ಆಗ್ರಹಕ್ಕೆ ಮಣಿದು ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಟಿಎಲ್‌ ಎಇಇ ಜಯಣ್ಣ ಹಾಗೂ ಸಿರಿಗೆರೆ ಶಾಖಾಧಿಕಾರಿ ಹೊನ್ನೂಜಿ ಅವರೊಡನೆ ಚರ್ಚೆಗೆ ಇಳಿದ ಗ್ರಾಮಸ್ಥರು, ನಿರಂತರ ಗುಣಮಟ್ಟದ ವಿದ್ಯುತ್‌ ನೀಡುವುದಾದರೆ ಪೂರೈಸಿ, ಇಲ್ಲವಾದರೆ ನಮಗೆ ವಿದ್ಯುತ್‌ ಸಂಪರ್ಕವೇ ಬೇಡ. ಹಿಂದೆ ಬುಡ್ಡಿ, ಲಾಟೀನ್‌ ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದಂತೆ ಅದಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತೇವೆ ಎಂದು ಹೇಳಿದರು.

ಎಇಇ ಜಯಣ್ಣ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ, ಗ್ರಾಮದ ಸುತ್ತಲಿನ ಜನರಿಗೆ ಗುಣಮಟ್ಟದ ವಿದ್ಯುತ್‌ ನೀಡಲು ಯತ್ನಿಸುತ್ತೇವೆ. ಕುಡಿಯಲು ಮತ್ತು ತೋಟಗಾರಿಕೆಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೊಳವೆ ಬಾವಿ ಕೊರೆಸಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಕೆಲವೇ ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಎ.ಎಸ್.‌ ಸುನಿಲ್ ಕುಮಾರ್, ಸ್ವಾಮಿ, ಪರಮೇಶ್ವರಪ್ಪ, ಹನುಮಂತಪ್ಪ, ಪ್ರಭಣ್ಣ, ಧನಂಜಯ, ಗಂಗಣ್ಣ, ಆನಂದಮೂರ್ತಿ, ಮಾರುತಿ, ಪರಮಶಿವಣ್ಣ, ನಾಗರಾಜ್, ಸುತ್ತಲಿನ ಗ್ರಾಮಸ್ಥರು ಭಾಗಿಯಾಗಿದ್ದರು.