ತಾಲೂಕಿನ ಗೋವಿಂದವಾಡಿ (ಕಲ್ಪುರ) ಗ್ರಾಮದ ಅಭಿವೃದ್ಧಿ ಅಧಿಕಾರಿ ಪಿ.ಗಿರೀಶ್‌, ಈಸ್ವತ್ತು ವಿತರಣೆಗೆ ₹15-25 ಸಾವಿರ ಲಂಚ, ಸೋಲಾರ್‌ ಪ್ಲಾಂಟ್‌ ಅಳವಡಿಕೆಗೆ ಭಾರಿ ಭ್ರಷ್ಟಾಚಾರ ನಡೆಸಿರುವುದಾಗಿ ಆರೋಪಿಸಿ ಗ್ರಾಮದ ಮುಖಂಡರು, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪಂಚಾಯ್ತಿ ಸಿಇಓ ಮೋನಾ ರೋತ್‌ರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

- ಇಸ್ವತ್ತು ವಿತರಣೆಗೆ ₹15-25000 ಪಡೆವ ಪಿಡಿಓ ಗಿರೀಶ್‌ । ಜಿ.ಪಂ. ಸಿಇಓ ಮೋನಾ ರೋತ್‌ಗೆ ದೂರು ಸಲ್ಲಿಕೆ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಗೋವಿಂದವಾಡಿ (ಕಲ್ಪುರ) ಗ್ರಾಮದ ಅಭಿವೃದ್ಧಿ ಅಧಿಕಾರಿ ಪಿ.ಗಿರೀಶ್‌, ಈಸ್ವತ್ತು ವಿತರಣೆಗೆ ₹15-25 ಸಾವಿರ ಲಂಚ, ಸೋಲಾರ್‌ ಪ್ಲಾಂಟ್‌ ಅಳವಡಿಕೆಗೆ ಭಾರಿ ಭ್ರಷ್ಟಾಚಾರ ನಡೆಸಿರುವುದಾಗಿ ಆರೋಪಿಸಿ ಗ್ರಾಮದ ಮುಖಂಡರು, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪಂಚಾಯ್ತಿ ಸಿಇಓ ಮೋನಾ ರೋತ್‌ರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಜೊತೆಗೆ ಗಿರೀಶ್‌ರನ್ನು ಕೂಡಲೇ ವರ್ಗಾವಣೆ ಮಾಡಿ, ಕಳೆದ 3 ವರ್ಷಗಳು ಅವರು ಮಾಡಿರುವ ಭ್ರಷ್ಟಾಚಾರಗಳನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಗಿರೀಶ್ ಸ್ವಾರ್ಥ ಹಾಗೂ ನಿರ್ಲಕ್ಷ್ಯತನವನ್ನು ಹೊಂದಿರುವ ಅಧಿಕಾರಿ, ಕಳೆದ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಆಗದಂತೆ ನೋಡಿಕೊಂಡರು. ಅಲ್ಲದೇ ಪಂಚಾಯ್ತಿಯ ಇತರೆ ಅಧಿಕಾರಿಗಳ ಜೊತೆಗೆ ದರ್ಪದಿಂದ ವರ್ತಿಸುತ್ತಿದ್ದರು. ಚುನಾಯಿತರಿಗೆ ಗೌರವ ನೀಡುತ್ತಿರಲಿಲ್ಲ. ಹೀಗಾಗಿ ಗಿರೀಶ್‌ರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಪ್ರಭಾರಿ ಪಿಡಿಓ ಆಗಿ ಶಿವಕುಮಾರ್‌ರನ್ನು ನೇಮಿಸಲಾಗಿತ್ತು. ಇವರ ಕಾರ್ಯ ಉತ್ತಮವಾಗಿದ್ದು, ಹೀಗಾಗಿ ಗಿರೀಶ್‌ರನ್ನು ಮರುನೇಮಿಸದೆ, ಶಿವಕುಮಾರ್‌ರನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದರು.

ಈ ಹಿಂದೆ ಇದ್ದ ಪಿಡಿಓ ಗಿರೀಶ್‌ ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ಕೊಟ್ಟು, ಪಂಚಾಯ್ತಿ ಕಟ್ಟಡ ನಿರ್ಮಾಣವಾಗದಂತೆ ಮಾಡಿದ್ದಾರೆ. ಪರಿಣಾಮ 3 ಗ್ರಾಮಸ್ಥರಿಗೆ ಗಿರೀಶ್‌ ವಿರುದ್ಧ ಮನಸ್ಥಾಪವಿದೆ. ಜೊತೆಗೆ ಗಿರೀಶ್‌ ಗ್ರಾಮಸ್ಥರಿಗೆ ಉಢಾಫೆ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೊಡುತ್ತಾರೆ. ಸರಿಯಾಗಿ ಬೀದಿ ದೀಪಗಳ ಅಳವಡಿಕೆಯಾಗಿಲ್ಲ. ಕುಡಿಯುವ ನೀರು ಬಿಡುವುದಿಲ್ಲ. ಚರಂಡಿ ಹಾಗು ಸ್ವಚ್ಚತೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಮತ್ತೆ ಬಂದರೆ ಪ್ರತಿಭಟನೆ- ಎಚ್ಚರಿಕೆ:ಗಿರೀಶ್‌ರನ್ನು ಕಡ್ಡಾಯ ರಜೆ ಬಳಿಕ ಮತ್ತೆ ಅದೇ ಗ್ರಾ.ಪಂಗೆ ವರ್ಗಾಯಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಇವರೇ ಪಂಚಾಯ್ತಿಗೆ ಪಿಡಿಓ ಅಗಿ ಬಂದರೆ, ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಡಾ. ಬಿ.ಆರ್‌.ಅಂಬೇಡ್ಕರ್ ಸಂಘದ ಲೋಕೇಶ್‌, ಶ್ರೀ ಬಸವೇಶ್ವರರ ಸಂಘದ ಬಸವಣ್ಣ, ಶ್ರೀಕನಕ ಯುವಕರ ಸಂಘದ ಗುರು, ಗ್ರಾ.ಪಂ. ಮಾಜಿ ಸದಸ್ಯ ಎಂ. ಮಂಜುನಾಥ್, ಬಸವಣ್ಣ, ಕಲ್ಪುರ ಉಮೇಶ್, ಮುಖಂಡರಾದ ಸಿದ್ದೇಶ್, ಪುಟ್ಟನಂಜೇಗೌಡ, ಎಂ.ಮಾದೇಶ್, ಮಲೇಗೌಡ, ನಂಜುಂಡ, ಮಹೇಶ್, ಚಂದನಕುಮಾರ್‌, ದೇಶಿಗೌಡನಪುರ ಸೋಮಣ್ಣ ಅನೇಕರು ಸಹಿ ಮಾಡಿ ಎಚ್ಚರಿಸಿದ್ದಾರೆ.

---

ಪಡೆವುದು ₹25,000, ಬಿಲ್‌ ಮಾತ್ರ ₹2000ಕ್ಕೆ

ಪಿಡಿಓ ಗಿರೀಶ್‌ ಮನೆಗಳಿಗೆ ಈಸ್ವತ್ತು ನೀಡಲು 15-25 ಸಾವಿರ ರು. ಕೇಳುತ್ತಾರೆ. ರಶೀದಿ ಮಾತ್ರ ₹2000ಕ್ಕೆ ಹಾಕುತ್ತಾರೆ. ಇನ್ನುಳಿದ ಹಣದ ಬಗ್ಗೆ ಯಾವುದೇ ಲೆಕ್ಕವೇ ಇಲ್ಲ. ಹಳೇಪುರ ಬಳಿ ಜಮೀನಿನಲ್ಲಿ ಸೋಲಾರ್ ಘಟಕ ಅಳವಡಿಕೆಗೆ ಪಂಚಾಯ್ತಿಯಿಂದ ಎನ್‌ಓಸಿ ಹಾಗೂ ಈಸ್ವತ್ತು ನೀಡಿದ್ದು, ಪಂಚಾಯ್ತಿಗೆ ಕೇವಲ 1.58 ಲಕ್ಷ ರು. ಮಾತ್ರ ಜಮೆ ಮಾಡಿದ್ದು, ಇನ್ನುಳಿದ 2 ಲಕ್ಷ ರು.ಗೂ ಹೆಚ್ಚು ಹಣ ಪಡೆದಿದ್ದಕ್ಕೆ ಲೆಕ್ಕವೇ ಇಲ್ಲ. ಹಲವು ತಿಂಗಳಿನಿಂದ ತೆರಿಗೆ ಸಂಗ್ರಹಿಸಿದ್ದು, ಅದನ್ನು ಸರ್ಕಾರಕ್ಕೆ ಸರಿಯಾಗಿ ಪಾವತಿಸಿಲ್ಲ. ಇದೆಲ್ಲದ್ದನ್ನು ಸ್ವಂತಕ್ಕೆ ಬಳಸಿಕೊಂಡು ಸರ್ಕಾರಕ್ಕೆ ಲಕ್ಷಾಂತರ ರು. ವಂಚನೆ ಎಸಗಿದ್ದಾರೆ ಎಂದು ಆಧಾರ ಸಹಿತ ಸಿಇಓಗೆ ದೂರಿತ್ತಿದ್ದಾರೆ.

ಇದಲ್ಲದೇ ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಾಣಕ್ಕೆ 21 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡಿದ್ದು, 2022-25ನೇ ಸಾಲಿನವರೆಗೆ ಸಾಮಗ್ರಿ ಹಾಗೂ ಕೂಲಿ ಬಿಲ್‌ ನೀಡಿಲ್ಲ. ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿ, ನಂತರ ಕಾಮಗಾರಿ ಆರಂಭಿಸಿ, ಪೋಟೋ ನೀಡಿದ್ದರು ಸಹ ಕಾಮಗಾರಿಗಳ ಬಿಲ್ ಬಾಬ್ತು ನೀಡದೇ ವಂಚಿಸುತ್ತಿದ್ದಾರೆ.

---

11ಸಿಎಚ್ಎನ್‌11