ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

| Published : Apr 07 2024, 01:51 AM IST

ಸಾರಾಂಶ

ಗುಳೇದಗುಡ್ಡ: ತಾಲೂಕಿನ ಕೋಟೆಕಲ್ ಗ್ರಾಮದಿಂದ ನೀಲಾನಗರ ಮಾರ್ಗವಾಗಿ ಜಿಲ್ಲಾ ಕೇಂದ್ರಕ್ಕೆ ಹೋಗುವ ಸುಮಾರು 5 ಕಿ.ಮೀ. ರಸ್ತೆ ಸಾಕಷ್ಟು ಹದಗೆಟ್ಟಿದೆ. ಕೂಡಲೇ ಅದನ್ನು ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ. ಕೋಟೆಕಲ್ ಮಾರ್ಗದ ಮೂಲಕ ಹೋಗುವ ರಸ್ತೆಯು ಲಿಂಗಾಪುರ, ಕೆಲವಡಿ, ಬಾಗಲಕೋಟೆ, ನೀಲಾನಗರ, ಶಿರೂರ, ಮಲ್ಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಲವಾರು ಗ್ರಾಮದ ಜನ ಇದೇ ಮಾರ್ಗದ ಮೂಲಕ ಬಾಗಲಕೋಟೆಗೆ ಹೋಗುತ್ತಾರೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ತಾಲೂಕಿನ ಕೋಟೆಕಲ್ ಗ್ರಾಮದಿಂದ ನೀಲಾನಗರ ಮಾರ್ಗವಾಗಿ ಜಿಲ್ಲಾ ಕೇಂದ್ರಕ್ಕೆ ಹೋಗುವ ಸುಮಾರು 5 ಕಿ.ಮೀ. ರಸ್ತೆ ಸಾಕಷ್ಟು ಹದಗೆಟ್ಟಿದೆ. ಕೂಡಲೇ ಅದನ್ನು ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕೋಟೆಕಲ್ ಮಾರ್ಗದ ಮೂಲಕ ಹೋಗುವ ರಸ್ತೆಯು ಲಿಂಗಾಪುರ, ಕೆಲವಡಿ, ಬಾಗಲಕೋಟೆ, ನೀಲಾನಗರ, ಶಿರೂರ, ಮಲ್ಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಲವಾರು ಗ್ರಾಮದ ಜನ ಇದೇ ಮಾರ್ಗದ ಮೂಲಕ ಬಾಗಲಕೋಟೆಗೆ ಹೋಗುತ್ತಾರೆ. ರೈತರು ಸಹ ತಾವು ಬೆಳೆದ ಫಸಲನ್ನು ಇದೇ ಮಾರ್ಗದ ಮೂಲಕ ಜಿಲ್ಲಾ ಕೇಂದ್ರವಾದ ಬಾಗಲಕೋಟೆಗೆ ಸಾಗಿಸುತ್ತಾರೆ. ಆದರೆ ಕಳೆದ ಒಂದು ವರ್ಷದಿಂದ ಈ ರಸ್ತೆ ಹಾಳಾಗಿದ್ದರೂ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದ್ದಕ್ಕೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಾರ್ಗದ ಮೂಲಕ ಬಾಗಲಕೋಟೆಗೆ ತೆರಳುವವರಿಗೆ ಸಾಕಷ್ಟು ಅನುಕೂಲಗಳಿವೆ. ಸಮಯ ಹಾಗೂ ಪೆಟ್ರೋಲ್ ಉಳಿತಾಯವಾಗುತ್ತದೆ. ಅಲ್ಲದೇ ಈ ಮಾರ್ಗವಾಗಿ ಕೋಟೆಕಲ್ ಗ್ರಾಮದ ಅನೇಕರ ಜಮೀನುಗಳ ಇವೆ. ಹೀಗಾಗಿ ಈ ರಸ್ತೆಯ ಮೂಲಕವೇ ನಿತ್ಯವೂ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಹೋಗಿ ಬರುತ್ತಾರೆ. ಕಳೆದ ವರ್ಷದಿಂದ ಹಾಳಾದ ಈ ರಸ್ತೆಯಿಂದ ಸಂಚಾರ ಸಂಚಕಾರ ತಂದಿದೆ. ಹದಗೆಟ್ಟ ರಸ್ತೆತುಂಬ ಕಲ್ಲುಗಳು ತುಂಬಿಕೊಂಡಿವೆ. ಅಲ್ಲಲ್ಲಿ ತಗ್ಗುಗಳು ಇವೆ. ವಾಹನಗಳು ಈ ಮಾರ್ಗವಾಗಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಬೈಕ್ ಸವಾರರ ಕಷ್ಟ ಹೇಳುವಂತಿಲ್ಲ ಆಗಿದೆ.

ರೈತರು ಬೆಳೆದ ತರಕಾರಿ ಸೇರಿದಂತೆ ಇನ್ನಿತರ ಬೆಳೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು ಕಷ್ಟಕರವಾಗಿದೆ. ರಸ್ತೆ ಹಾಳಾಗಿರುವುದರಿಂದ ಮಾರುಕಟ್ಟೆಗೆ ತೆರಳಲು ತಡವಾಗುತ್ತದೆ. ಬೈಕ್ ಸವಾರರು ಹೋಗುವಾಗ ಸ್ವಲ್ಪ ಆಯ ತಪ್ಪಿದರೆ ಸಾಕು ಪ್ರಾಣಕ್ಕೆ ಆಪತ್ತು ಖಂಡಿತ ಎನ್ನುತ್ತಾರೆ. ಈ ಮಾರ್ಗದಲ್ಲಿ ಹೋಗುವ ಬೈಕ್ ಸವಾರರು. ರಾತ್ರಿ ಹೊತ್ತು ಬೈಕ್‌ ಸವಾರಿ ಮಾಡುವಂತಿಲ್ಲ. ಕಾರಣ ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ನೀಲಾನಗರ, ಕೋಟೇಕಲ್ ಮತ್ತು ಲಿಂಗಾಪೂರ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.--------

ಕೋಟ್

ರಸ್ತೆ ಹಾಳಾಗಿದೆ. ಸಂಬಂಧಪಟ್ಟ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇನ್ನೊಂದು ವಾರ ನೋಡಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ.

- ಸಚ್ಚಿದಾನಂದ ನಾಗರಾಳ, ಕೋಟೆಕಲ್ ಗ್ರಾಮ