ಕುಡಿವ ನೀರಿನ ಸಮಸ್ಯೆಗೆ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

| Published : Jul 31 2024, 01:04 AM IST

ಕುಡಿವ ನೀರಿನ ಸಮಸ್ಯೆಗೆ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕೋಟೆಕಲ್ ಗ್ರಾಪಂ ವ್ಯಾಪ್ತಿಗೆ ಬರುವ ತೋಗುಣಸಿ ಗ್ರಾಮದ ಜನ ಕುಡಿಯುವ ನೀರು ಪೂರೈಕೆಯಲ್ಲಿ ತಿಂಗಳಿಂದ ವ್ಯತ್ಯಯಾಗಿದೆ ಎಂದು ಆರೋಪಿಸಿ ಮಂಗಳವಾರ ಕೋಟೆಕಲ್ ಗ್ರಾಪಂಗೆ ಬಂದು ಪಿಡಿಒ ಆರತಿ ಕ್ಷತ್ರಿ ಹಾಗೂ ಅಧ್ಯಕ್ಷೆ ಪಾರ್ವತಿ ಹುಚ್ಚಪ್ಪ ಮೇಟಿ ಅವರನ್ನು ತರಾಟೆಗೆ ತೆಗೆದುಕೊಂಡು ವಾಗ್ವಾದಕ್ಕಿಳಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ಕೋಟೆಕಲ್ ಗ್ರಾಪಂ ವ್ಯಾಪ್ತಿಗೆ ಬರುವ ತೋಗುಣಸಿ ಗ್ರಾಮದ ಜನ ಕುಡಿಯುವ ನೀರು ಪೂರೈಕೆಯಲ್ಲಿ ತಿಂಗಳಿಂದ ವ್ಯತ್ಯಯಾಗಿದೆ ಎಂದು ಆರೋಪಿಸಿ ಮಂಗಳವಾರ ಕೋಟೆಕಲ್ ಗ್ರಾಪಂಗೆ ಬಂದು ಪಿಡಿಒ ಆರತಿ ಕ್ಷತ್ರಿ ಹಾಗೂ ಅಧ್ಯಕ್ಷೆ ಪಾರ್ವತಿ ಹುಚ್ಚಪ್ಪ ಮೇಟಿ ಅವರನ್ನು ತರಾಟೆಗೆ ತೆಗೆದುಕೊಂಡು ವಾಗ್ವಾದಕ್ಕಿಳಿದ ಘಟನೆ ನಡೆಯಿತು.

ಈ ವೇಳೆ ಮಾತನಾಡಿದ ಪಿಡಿಒ, ತೋಗುಣಸಿ ಗ್ರಾಮದ ಸದಸ್ಯರು ಸಾಮಾನ್ಯ ಸಭೆ ಇದ್ದಾಗ ಪಂಚಾಯತಿಗೆ ಬರದೇ ಗೈರಾಗುತ್ತಾರೆ. ಆದರೂ ತೋಗುಣಸಿ ಗ್ರಾಮದ ಬೋರ್‌ವೆಲ್‌ದಿಂದ ಪೂರೈಸುವ ಕುಡಿಯುವ ನೀರಿನ ಮೋಟರ್ ಮೇಲಿಂದ ಮೇಲೆ ದುರಸ್ತಿಗೆ ಬಂದರೂ ತಿಂಗಳಲ್ಲಿ 15 ಬಾರಿ ದುರಸ್ತಿ ಮಾಡಿಸಿದ್ದೇವೆ. ನಾನು ಕೋಟೆಕಲ್ ಗ್ರಾಪಂಗೆ ವರ್ಗವಾಗಿ ಬಂದಾಗಿನಿಂದ 3 ಸಲ ಗ್ರಾಮದ ತೆರೆದ ಚರಂಡಿ ಸ್ವಚ್ಛ ಮಾಡಿಸಿದ್ದೇನೆ. ಗ್ರಾಮದ ಜಾತ್ರೆ ಸಂದರ್ಭದಲ್ಲಿ ಸದಸ್ಯರು ಹೇಳಿದಂತೆ ಹಣ ಖರ್ಚು ಮಾಡಿದ್ದೇನೆ. ಸಾಮಾನ್ಯ ಸಭೆ ಕರೆದರೆ ತೋಗುಣಸಿ ಸದಸ್ಯರೇ ಗೈರಾದರೆ ತಮ್ಮೂರ ಸಮಸ್ಯೆಗಳನ್ನು ಕ್ರಿಯಾ ಯೋಜನೆಯಲ್ಲಿ ಒಪ್ಪಿಗೆ ತೆಗೆದುಕೊಂಡು ಅಪ್ರೂವಲ್ ಮಾಡಿಸುವವರು ಯಾರು? ಕ್ರಿಯಾ ಯೋಜನೆಯಲ್ಲಿ ಇರದ ಕೆಲಸ ಮಾಡಿಸುವುದಾದರೂ ಹೇಗೆ? ಕೋಟೆಕಲ್ ಗ್ರಾಮದ ಸದಸ್ಯರು ಸಭೆಗೆ ಬಂದು ತಮ್ಮೂರ ಸಮಸ್ಯೆಗಳನ್ನು ಬಗೆಹರಿಸಿಕೊಂಡಂತೆ ತೋಗುಣಸಿ ಗ್ರಾಮದ ಸದಸ್ಯರು ಸರಿಯಾಗಿ ಸ್ಪಂದಿಸದಿದ್ದರೆ ತಪ್ಪು ಯಾರದು ಎಂದು ಸೇರಿದ ಗ್ರಾಮಸ್ಥರಿಗೆ ಪಿಡಒ ಹಾಗೂ ಅಧ್ಯಕ್ಷರು ಪ್ರಶ್ನಿಸಿದರು.

ನಂತರ ಗ್ರಾಮದ ಜನರು ತಮ್ಮೂರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡುವುದಾಗಿ ಹೇಳಿದರು. ಪಟ್ಟಿ ಕೊಡಿ ಒಂದೊಂದಾಗಿ ಸಮಸ್ಯೆಗಳನ್ನು ಬಗೆ ಹರಿಸೋಣ ಎಂದು ಪಿಡಿಒ ಆರತಿ ಕ್ಷತ್ರಿ ಗ್ರಾಮಸ್ಥರಿಗೆ ಅಶ್ವಾಸನೆ ನೀಡಿದರು.

ಈ ವೇಳೆ ತೋಗುಣಸಿ ಗ್ರಾಮದ ಸದಸ್ಯ ಕಾಶಿನಾಥ ಪುರಾಣಿಕಮಠ, ಉಪಾಧ್ಯಕ್ಷ ಮಲ್ಲಪ್ಪ ಜಾಲೀಹಾಳ, ಗ್ರಾಮಸ್ಥರಾದ ಯಲ್ಲಪ್ಪ ಬಸರಕೋಡ, ಶಿವಾನಂದ ವಾಲೀಕಾರ, ಎಸ್.ಎಂ.ಪಾಟೀಲ, ಕೇಶಪ್ಪ ಲಮಾಣಿ, ಬಸವರಾಜ ಚಿಲ್ಲಾಪೂರ, ಸುರೇಶ ಕಲಕೊಂಡ, ರಂಗಪ್ಪ ಜಾನಮಟ್ಟಿ, ಗಂಗಪ್ಪ ಚಿನ್ನಣ್ಣವರ್, ಗದಿಗೆಪ್ಪ ಎಮ್ಮಿ, ಸೇರಿದಂತೆ ಇನ್ನೂ ಅನೇಕರು ಇದ್ದರು.

--

ಕೋಟ್‌

ಟ್ಯಾಂಕರ್ ಮೂಲಕ ತೋಗುಣಸಿ ಗ್ರಾಮದಲ್ಲಿ ಕುಡಿಯಲು ನೀರು ಪೂರೈಸಲಾಗಿದೆ. ಸಾಮಾನ್ಯ ಸಭೆಗೆ ಗ್ರಾಮದ ಸದಸ್ಯರು ಬರದಿದ್ದರೆ ತಮ್ಮೂರ ಸಮಸ್ಯೆ ಬಗೆಹರಿಸುವುದಾದರೂ ಯಾರು?.

-ಪಾರ್ವತಿ ಹುಚ್ಚಪ್ಪ ಮೇಟಿ, ಅಧ್ಯಕ್ಷರು ಗ್ರಾಪಂ ಕೋಟೆಕಲ್.

---

ತೋಗುಣಸಿ ಗ್ರಾಮದ ಸದಸ್ಯರು ಸಾಮಾನ್ಯ ಸಭೆಗೆ ಬಂದು ತಮ್ಮೂರಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು. ಆದರೆ ಸದಸ್ಯರು ಸಾಮಾನ್ಯ ಸಭೆಗೆ ಗೈರಾದರೆ ಗ್ರಾಮದ ಸಮಸ್ಯೆ ಹೇಗೆ ಬಗೆ ಹರಿಯುತ್ತವೆ? ಕುಡಿಯುವ ನೀರಿಗೆ ಕಳೆದ ತಿಂಗಳಲ್ಲಿ 15 ಬಾರಿ ಬೋರ್ ರಿಪೇರಿ ಮಾಡಿಸಿದ್ದೇನೆ. ಇವತ್ತು ಮತ್ತೆ ದುರಸ್ತಿ ಮಾಡಿಸುತ್ತೇವೆ.

-ಆರತಿ ಕ್ಷತ್ರಿ, ಪಿಡಿಒ ಗ್ರಾಪಂ ಕೋಟೆಕಲ್.