ಸಾರಾಂಶ
ಕಳೆದ ವರ್ಷ ತಡೆಗೋಡೆ ಕುಸಿದುಬಿದ್ದಿತ್ತು. ಯಾವುದೇ ಅಪಾಯವಾಗಿರಲಿಲ್ಲ. ಈ ಬಾರಿ ಬೀಳುವ ಮುನ್ನ ಉಳ್ಳಾಲ ನಗರಸಭೆ ಆಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿ ಪೌರಾಯುಕ್ತರಿಗೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಳ್ಳಾಲ
ಖಾಸಗಿ ವ್ಯಕ್ತಿಯೊಬ್ಬರ ಮನೆಯ ತಡೆಗೋಡೆ ರಸ್ತೆಗೆ ಬಾಗಿದ್ದು, ರಸ್ತೆಯಲ್ಲಿ ಓಡಾಡುವ ಮಕ್ಕಳು, ವಾಹನಗಳಿಗೆ ಅಪಾಯವಿದೆ. ತಕ್ಷಣವೇ ಉಳ್ಳಾಲ ನಗರಸಭೆ ಪರಿಶೀಲಿಸಿ ತೆರವುಗೊಳಿಸಬೇಕು ಎಂದು ನಗರಸಭೆ ೨೭ನೇ ವಾರ್ಡಿನ ಯು.ಟಿ. ಕಂಪೌಂಡ್ ನಿವಾಸಿಗಳು ಆಗ್ರಹಿಸಿದ್ದಾರೆ. ಸ್ಥಳೀಯ ನಿವಾಸಿ ಹರೀಶ್ ಎಂಬವರ ಮನೆಯ ತಡೆಗೋಡೆ ಬಾಗಿದ್ದು, ಅಪಾಯಕಾರಿಯಾಗಿದೆ. ಈ ಮೊದಲೇ ಮನೆಯವರಿಗೆ ತೆರವು ಮಾಡಲು ತಿಳಿಸಿದರೂ ಸ್ಪಂದಿಸಿಲ್ಲ. ಕಳೆದ ವರ್ಷ ತಡೆಗೋಡೆ ಕುಸಿದುಬಿದ್ದಿತ್ತು. ಯಾವುದೇ ಅಪಾಯವಾಗಿರಲಿಲ್ಲ. ಈ ಬಾರಿ ಬೀಳುವ ಮುನ್ನ ಉಳ್ಳಾಲ ನಗರಸಭೆ ಆಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿ ಪೌರಾಯುಕ್ತರಿಗೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.ಶಾಲೆಗೆ, ಮದರಸಕ್ಕೆ ಇದೇ ರಸ್ತೆಯಲ್ಲಿ ಮಕ್ಕಳು ಹೋಗುತ್ತಾರೆ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರಾದ ನಿಝಾಮುದ್ದೀನ್ ಹೇಳಿದರು.
ಈ ಮೊದಲು ಕಂಪೌಂಡ್ ಕೆಳಗೆ ಬಿದ್ದಿತ್ತು. ಆ ಸಂದರ್ಭವೂ ನೆರೆಮನೆಯವರಾದ ನಾವೇ ದುರಸ್ತಿ ಕಾರ್ಯ ನಡೆಸಿದ್ದೆವು. ಕಂಪೌಂಡಿನ ಹುಲ್ಲುಗಳನ್ನು ತುಂಡು ಮಾಡಿದರೂ ಅಲ್ಲೇ ಇಟ್ಟು ಹೋಗುತ್ತಾರೆ ಎಂದು ಸ್ಥಳೀಯ ಹಮೀದ್ ದೂರುತ್ತಾರೆ.ನಾಗರಿಕ ಸಮಿತಿ ವತಿಯಿಂದ ಪತ್ರ ಬರೆದಿದ್ದು, ಅದನ್ನು ನಗರಸಭೆಗೆ ನೀಡಲಿದ್ದೇವೆ. ಅನಾಹುತ ಸಂಭವಿಸಿದಲ್ಲಿ ನಗರಸಭೆಯೇ ಹೊಣೆಯಾಗಲಿದೆ. ಮನೆಮಂದಿಗೆ ತಿಳಿಸಿದಾಗ ಜು.೧೬ರಂದು ದೇವಸ್ಥಾನದಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮವಹಿಸಿಲ್ಲ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಇಬ್ರಾಹಿಂ ಹೇಳಿದರು.