ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಆ, ಆ ಅಮ್ಮಾ, ಅಮ್ಮಾ ಎಂದು ಕರುಳು ಕಿತ್ತು ಬರುವಂತೆ ಹಸಿವಿನ ಆಕ್ರಂದನದಿಂದ ಕಿರುಚುತ್ತಿದ್ದ ಹಸುಗೂಸಿನ ಕೂಗು ಕೇಳಿ ನೆರೆದಿದ್ದ ಮಹಿಳೆಯರ ತಾಯ್ತನ ಜಾಗ್ರತವಾಯಿತು. ಓಡಿ ಬಂದು ಹಸುಗೂಸು ಎತ್ತಿಕೊಂಡು ಹಾಲುಣಿಸಿ ಜೋಗುಳ ಹಾಡಿದಾಗ ಉಳಿದವರ ಕಣ್ಣಂಚಲ್ಲಿ ನೀರು ಕಾಣಿಸಿತ್ತು!

ಆಗ ತಾನೆ ಹುಟ್ಟಿ ಮಗುವನ್ನೂ ಹೆತ್ತವಳು ಬಿಸಾಡಿ ಹೋಗಿದ್ದಾಳೆ. ತಾಲೂಕಿನ ದ್ಯಾಂಪುರು ಗ್ರಾಮದ ಸರ್ಕಾರಿ ಶಾಲೆ ಅಂಗಳದಲ್ಲಿ ದಾರಿ ಹೋಕರಿಗೆ ಕೇಳಿದ್ದು ಹಸೂಗೂಸಿನ ಹಸಿವಿನ ಆಕ್ರಂದನ. ತಾಯಿ ಎದೆಹಾಲು ಕುಡಿದು ಹಾಯಾಗಿ ಮಲಗಬೇಕಿದ್ದ ಹಸುಗೂಸು ಬೀದಿಯಲ್ಲಿ ನರಳುತ್ತಿತ್ತು. ಮಗುವಿನ ಮುಖವನ್ನಾದರೂ ಹಡೆದಾಕೆ ನೋಡಿದ್ದಾಳೊ ಇಲ್ಲವೋ, ಹುಟ್ಟಿದ ತಕ್ಷಣ ಮಗುವೇ ಆಕೆಗೆ ಬೇಡವಾಯಿತೇ? ಎಷ್ಟು ಚಂದೈತಿ, ಏನ್ ಪಾಪ್ ಮಾಡೆತ್ತಿದು ಎಂದುಕೊಂಡ ತಾಯಂದಿರು ಸೆರಗ ತುದಿಯಿಂದ ಕಣ್ಣು ಒರೆಸಿಕೊಂಡರು.

ಮಗುವಿನ ಹೆತ್ತ ಕರುಳಿಗೆ ಹಿಡಿಶಾಪ ಹಾಕುತ್ತಾ ಅಲ್ಲೆ ಮನೆಯೊಂದರ ಬಳಿ ತೆಗೆದುಕೊಂಡು ಹೋಗಿ, ರಕ್ತದ ಮಡುವಿನಲ್ಲಿದ್ದ ಗಂಡು ಮಗುವಿಗೆ ಬಿಸಿ ನೀರು ಹಾಕಿ ರಕ್ತ ತೊಳೆದು, ಕೊಬ್ಬರಿ ಎಣ್ಣೆ ಹಚ್ಚಿ ಸ್ನಾನ ಮಾಡಿಸಿದರು. ಇನ್ನಷ್ಟು ಹಾಲುಣಿಸಿ ಸ್ವಂತ ಮಗುವಂತೆ ಲಾಲಿ ಹಾಡಿ, ಎತ್ತಿಕೊಂಡು ಮುದ್ದಾಡಿದರು. ಹಡದವ್ವನ ಕಾಣದ ಮಗು ಗ್ರಾಮಸ್ಥರ ತೆಕ್ಕೆಯಲ್ಲಿ ನಿದ್ದೆಗೆ ಜಾರಿತು. ಅಲ್ಲಿಯೇ ಇದ್ದ ಆರೋಗ್ಯ ಸಹಾಯಕ ಕಾಳಪ್ಪ ಕುಂಬಾರ ಸಹ ಮಗುವನ್ನು ಆರೈಕೆ ಮಾಡಿ ವೈದ್ಯಾಧಿಕಾರಿಗಳಿಗೆ, ಮಕ್ಕಳ ಇಲಾಖೆಗೆ ತಿಳಿಸಿ ಮುಂದಿನ ಕಾನೂನು ಸುರಕ್ಷಾ ಕ್ರಮ ತೆಗೆದುಕೊಂಡು ಕೊಪ್ಪಳ ಜಿಲ್ಲಾಸ್ಪತ್ರೆಗೆ ಒಪ್ಪಿಸಿ ಬಂದರು.

ಬೇಡವಾದ ಕೂಸು ನಮಗಿರಲಿ: ಈ ಕೂಸು ಎಷ್ಟು ಚಂದೈತೀ, ಅದನ್ನು ನಾನೇ ಜೋಪಾನ್ ಮಾಡ್ತೀನ್ರೀ, ಅದನ್ನ ನನಗ ಕೊಟ್ಟು ಬಿಡ್ರೀ ಎಂದು ಅಲ್ಲಿದ್ದ ಮೂರ್ನಾಲ್ಕು ಮಂದಿ ಕಂದಮ್ಮನ ಜೋಪಾನ ಮಾಡಲು ಮುಂದ ಬಂದರು. ಕರುಣೆ ಇಲ್ಲದೇ ಬೀದಿಯಲ್ಲಿ ಬಿಸಾಡಿದ ಆ ತಾಯಿ ತಾಯಿಯೇ ಅಲ್ಲ, ಆಕೆಗೆ ಬಿಸಾಡುವ ಕಳ್ಳಾದರೂ ಹೇಗೆ ಬಂತು? ಇಂತ ಕ್ರೂರತನ ತಾಯಿಗೆ ಯಾಕೆ ಬಂತು? ಸಮಾಜ ಅಳುಕಿಗೆ ಅಂಜಿದಳೆ? ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿಬಂದವು. ನಮಗ್ ಕೊಟ್ಟು ಬೀಡ್ರೀ, ನಾವ್ ಜೋಪಾನ್ ಮಾಡ್ತೀವಿ ಎಂದು ಮಕ್ಕಳಿಲ್ಲದ ವ್ಯಕ್ತಿ ಗೋಗರೆದರು. ಇನ್ನೊಬ್ಬ ತಾಯಿ ನಾನೇ ಜೋಪಾನ್ ಮಾಡ್ತೀನಿ ಬಿಡ್ರೀ ಎಂದು ಆಸೆಪಟ್ಟು ಕೇಳಿದಳು.


ಮಗು ಅಳೋದು ಕೇಳಿ ನಮ್ ಕರುಳ್ ಚುರುಕ್ ಅಂದ್ವು ರೀ, ಇಂಥ ಮಗು ಎಸೆದ ಹೋಗಾಕ್ಕಾದ್ರೂ ಮನಸ್ ಹೇಂಗ್ ಬಂತೋ ಆ ಮಹಾತಾಯಿಗೆ. ನಾವ್ ಹಾಲುಣಿಸಿ, ಸ್ನಾನ ಮಾಡಿಸಿದ್ವಿ. ಇಲ್ಲೇ ಜೋಪಾನ್ ಮಾಡಾಕ್ ಬಾಳ್ ಮಂದಿ ಕೇಳಿದ್ರೂ, ಕಾನೂನಾತ್ಮಕವಾಗಿ ಕೋಡಾಕ್ ಬರಲ್ಲಂದ್ರು. ಕೊಟ್ಟಿದ್ರ ನಾವಾ ಜೋಪಾನ್ ಮಾಡ್ತೀದ್ವಿ ಎಂದು ದ್ಯಾಂಪುರು ಗ್ರಾಮದ ಇಂದ್ರಮ್ಮ ಹಿರೇಮಠ, ಲಕ್ಷ್ಮಮ್ಮ, ರಾಧಾ ಹಡಪದ ತಿಳಿಸಿದ್ದಾರೆ.

ಬೀದಿಯಲ್ಲಿ ಬಿದ್ದ ಮಗುವನ್ನು ಸ್ಥಳೀಯರು ಆರೈಕೆ ಮಾಡಿರುವುದು ನಿಜಕ್ಕೂ ಮಾನವೀಯ ಸಂಗತಿ. ಮಗು ಬೇಡವಾದರೆ ಎಲ್ಲಿ ಬೇಕಂದಲ್ಲಿ ಬಿಸಾಡಬಾರದು. ಅದಕ್ಕಾಗಿ ಕೊಪ್ಪಳದಲ್ಲೊ ತೊಟ್ಟಿಲು ಮನೆ ಇದೆ. ಅಲ್ಲಿ ಕೂಸು ಇಟ್ಟು ಬಂದರೆ ಇಲಾಖೆಯಿಂದ ಆರೈಕೆ ಕಾರ್ಯ ಜರುಗುತ್ತದೆ. ಕೂಸು ಎಲ್ಲೆಂದರಲ್ಲಿ ಬಿಟ್ಟು ಹೋಗುವುದು ತಪ್ಪು. ಈ ರೀತಿ ಘಟನೆ ಜರುಗಬಾರದು ಎಂದು ಯಲಬುರ್ಗಾ ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ತಿಳಿಸಿದ್ದಾರೆ.