ಚೆಸ್ಕಾಂ ಲಾರಿ ತಡೆಹಿಡಿದ ಆಲೂರು ಸಿಂಧುವಳ್ಳಿ ಗ್ರಾಮಸ್ಥರು

| Published : May 13 2024, 12:01 AM IST

ಚೆಸ್ಕಾಂ ಲಾರಿ ತಡೆಹಿಡಿದ ಆಲೂರು ಸಿಂಧುವಳ್ಳಿ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

100 ಕೆವಿಎ ಸಾಮರ್ಥ್ಯವುಳ್ಳ ಟ್ರಾನ್ಸ್‌ಫಾರ್ಮರ್‌ ಅಳವಡಿಸುವವರೆಗೆ ಚೆಸ್ಕಾಂಗೆ ಸೇರಿದ ಲಾರಿ ವಾಪಾಸು ಕೊಡುವುದಿಲ್ಲವೆಂದು ತಡೆ ಹಿಡಿದಿರುವ ಘಟನೆ ಆಲೂರು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಜರುಗಿದೆ.

100 ಕೆವಿಎ ಟ್ರಾನ್ಸ್‌ಫಾರ್ಮರ್‌ ಅಳವಡಿಕೆಗೆ ಒತ್ತಾಯ

ಕನ್ನಡಪ್ರಭ ವಾರ್ತೆ ಆಲೂರು

100 ಕೆವಿಎ ಸಾಮರ್ಥ್ಯವುಳ್ಳ ಟ್ರಾನ್ಸ್‌ಫಾರ್ಮರ್‌ ಅಳವಡಿಸುವವರೆಗೆ ಚೆಸ್ಕಾಂಗೆ ಸೇರಿದ ಲಾರಿ ವಾಪಾಸು ಕೊಡುವುದಿಲ್ಲವೆಂದು ತಡೆ ಹಿಡಿದಿರುವ ಘಟನೆ ಸಿಂಧುವಳ್ಳಿ ಗ್ರಾಮದಲ್ಲಿ ಜರುಗಿದೆ.

12 ಸಕ್ರಮ ಕೊಳವೆಬಾವಿ 10 ಬಾವಿ ಅಕ್ರಮವಾಗಿ ಇವೆ. ಪ್ರತಿದಿನ ಒಂದಲ್ಲ ಒಂದು ತೊಂದರೆಯಾಗುತ್ತಿದೆ. 150 ಮನೆಗಳಿರುವ ಗ್ರಾಮಕ್ಕೆ 100 ಕೆವಿ ಸಾಮರ್ಥ್ಯವಿರುವ ಟ್ರಾನ್ಸ್‌ಫಾರ್ಮರ್‌ ಬೇಡಿಕೆ ಇಡಲಾಗಿತ್ತು. ಗ್ರಾಮಕ್ಕೆ ಅಳವಡಿಸಿದ್ದ 63 ಕೆವಿಎ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿದ್ದು ನಾಲ್ಕು ದಿನಗಳಿಂದ ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗಿದೆ. ಕುಡಿಯುವ ನೀರು ಇತರೆ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದೇ ಟ್ರಾನ್ಸ್‌ಫಾರ್ಮರ್‌ ಮೂರು ತಿಂಗಳಿನಿ೦ದ ಮೂರು ಬಾರಿ ಸುಟ್ಟು ಹೋಗಿದೆ. ಮೂರು ದಿನಗಳ ಹಿಂದೆ ಕೆಟ್ಟು ಹೋಗಿದ್ದ ಟ್ರಾನ್ಸ್‌ಫಾರ್ಮರ್‌ ಅನ್ನು ರಿಪೇರಿಗೆಂದು ಸಕಲೇಶಪುರಕ್ಕೆ ತೆಗೆದುಕೊಂಡು ಹೋದರು. ಆದರೆ ಇಂದು ಅದೇ ಟಿ.ಸಿ.ಯನ್ನು ವಾಪಾಸು ತಂದು ಕೇವಲ ಮನೆಗಳಿಗೆ ಮಾತ್ರ ವಿದ್ಯುತ್ ಕೊಡಲು ಸಿದ್ಧರಾದರು.

ಇದರಿಂದ ಕೆರಳಿದ ಗ್ರಾಮಸ್ಥರು, ಕೇವಲ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಿದರೆ ಸಾಲದು, ಕೃಷಿ ಬಳಕೆಗೂ ಬೇಕು. ಕೃಷಿ ವಲಯ ಬರದ ಬೇಗೆಯಿಂದ ನಲುಗುತ್ತಿದೆ. 100 ಕೆವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ ಹಾಕುವವರೆಗೂ ಇಂದು ತಂದಿರುವ ಟ್ರಾನ್ಸ್‌ಫಾರ್ಮರ್‌ ಮತ್ತು ಲಾರಿಯನ್ನು ಬಿಡುವುದಿಲ್ಲ ಎಂದು ಪಟ್ಟುಹಿಡಿದ ಕಾರಣ ಲಾರಿಯನ್ನು ಗ್ರಾಮದಲ್ಲಿ ಬಿಟ್ಟು ಸಿಬ್ಬಂದಿ ವಾಪಾಸು ತೆರಳಿದರು.

ಶಾಸಕರು ಸೂಚಿಸಿದರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಟಿಸಿ ಮೂರು ಬಾರಿ ಸುಟ್ಟು ಹೋದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳಿಗೆ ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರಾದ ಹರೀಶ್ ಎಚ್ಚರಿಕೆ ನೀಡಿದರು.