ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗುಂಡಿ ಬಿದ್ದಿರುವ ಕೆ.ಆರ್.ಪೇಟೆ-ಶ್ರವಣಬೆಳಗೊಳ ಮುಖ್ಯ ರಸ್ತೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಚಿಕ್ಕಹೊಸಹಳ್ಳಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ನೇತೃತ್ವದಲ್ಲಿ ರಸ್ತೆಯಲ್ಲಿ ನಿಂತು ಪ್ರತಿಭಟಿಸಿದ ಗ್ರಾಮಸ್ಥರು, ಅನುದಾನ ಮಂಜೂರಾಗಿದ್ದರೂ ರಸ್ತೆ ಕಾಮಗಾರಿ ನಡೆಸದೆ ದಿವ್ಯ ನಿರ್ಲಕ್ಷ್ಯ ಪ್ರದರ್ಶಿಸುತ್ತಿರುವ ಪಿ.ಡ್ಲ್ಯೂ.ಡಿ ಇಲಾಖೆಯ ಎಂಜಿನಿಯರು ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪಟ್ಟಣದ ಹೊರವಲಯದ ಚಿಕ್ಕಹೊಸಹಳ್ಳಿ ವ್ಯಾಪ್ತಿಯ ಗುಂಡಿ ಬಿದ್ದಿರುವ ಕೆ.ಆರ್.ಪೇಟೆ- ಶ್ರವಣಬೆಳಗೊಳ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸುವಂತೆ ಹಲವು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರೂ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ರಮೇಶ್, ಚಾರಿತ್ರಿಕ ಹಾಗೂ ಧಾರ್ಮಿಕ ಮಹತ್ವ ಪಡೆದಿರುವ ವಿಶ್ವ ವಿಖ್ಯಾತ ಶ್ರವಣಬೆಳಗೊಳ ಮುಖ್ಯ ರಸ್ತೆ ನಮ್ಮ ಗ್ರಾಮದ ಮೂಲಕವೇ ಹಾದು ಹೋಗಿದೆ. ದಿನನಿತ್ಯ ನೂರಾರು ಪ್ರವಾಸಿಗರು ಹಾಗೂ ಯಾತ್ರಿಕರು ಇದೇ ಮಾರ್ಗದಲ್ಲಿ ಶ್ರವಣಬೆಳಗೊಳಕ್ಕೆ ಹೋಗುತ್ತಾರೆ. ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಕಿರಿದಾಗಿದ್ದು ಸಂಪೂರ್ಣ ಗುಂಡಿ ಬಿದ್ದಿದ್ದು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದೆ ಎಂದು ದೂರಿದರು.
2009ರಲ್ಲಿ ಕಿರಿದಾದ ರಸ್ತೆಯಲ್ಲಿ ಬಸ್ ಬಿದ್ದು 6 ಜನ ಮೃತಪಟ್ಟಿದ್ದರು. ಈಗ ರಸ್ತೆ ಗುಂಡಿ ಬಿದ್ದು ಮಳೆ ನೀರು ತುಂಬಿ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಈ ಹಿಂದೆ ಗ್ರಾಮಸ್ಥರ ಹೋರಾಟದ ಫಲವಾಗಿ ಗ್ರಾಮದ ಹೊರವಲಯದ ಸರಪಳಿ 810 ರಿಂದ 1600 ರ ವರೆಗೆ ರಸ್ತೆ ಅಭಿವೃದ್ಧಿಗೆ ಈ ಹಿಂದಿನ ರಾಜ್ಯ ಸರ್ಕಾರ 6 ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು.ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಜಾಗ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲು 3.79 ಲಕ್ಷ ಹಣ ಬಿಡುಗಡೆ ಮಾಡಿದೆ. ಸದರಿ ಪರಿಹಾರದ ಹಣ ಪಾಂಡವಪುರ ಉಪ ವಿಭಾಗಾಧಿಕಾರಿಗಳ ಖಾತೆಯಲ್ಲಿದೆ ಎಂದರು.
ಭೂ ಸ್ವಾಧೀನದ ಪರಿಹಾರ ಹಣ ಬಿಡುಗಡೆಯಾಗಿದ್ದರೂ ಅದನ್ನು ರೈತರಿಗೆ ನೀಡಿ ಭೂ ಸ್ವಾಧೀನಕ್ಕೆ ಇದುವರೆಗೂ ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ. ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಕೂಡ ಸದರಿ ರಸ್ತೆಯ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಕ್ರಮ ವಹಿಸಿಲ್ಲ ಎಂದು ಕಿಡಿಕಾರಿದರು.ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ, ನೋಟಿಷಿಕೇಷನ್ ಪ್ರಕಾರ ಮಂಜೂರಾತಿಯಾದ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರು ಗುತ್ತಿಗೆದಾರನೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಕೆ.ಆರ್.ಪೇಟೆ ಪಟ್ಟಣದ ಕೊನೆ ಭಾಗದ ತುದಿಯಲ್ಲಿ ಸುಮಾರು 200 ಮೀಟರ್‌ನಷ್ಟು ರಸ್ತೆಯನ್ನು ಯಾವುದೇ ಅನುಮೋದನೆ ಪಡೆಯದೆ ಅಗಲೀಕರಣ ಮಾಡಿ ಗ್ರಾಮದೊಳಗಿನ ರಸ್ತೆಯನ್ನು ಅಭಿವೃದ್ಧಿಪಡಿಸದೆ ಕೈಬಿಟ್ಟಿದ್ದಾರೆ ಎಂದು ದೂರಿದರು.ಗ್ರಾಮದೊಳಗೆ ರಸ್ತೆ ಅಗಲೀಕರಣ ಮಾಡುವುದಿರಲಿ ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಯತ್ನ ನಡೆಸಿಲ್ಲ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಗ್ರಾಮಸ್ಥರು ನಿತ್ಯ ಕಿರುಕುಳಕ್ಕೆ ಒಳಗಾಗಿದ್ದಾರೆ. ಗ್ರಾಮದೊಳಗಿನ ರಸ್ತೆಯನ್ನು ಸರಿಪಡಿಸದಿದ್ದರೆ ಗ್ರಾಮಸ್ಥರು ಶೀಘ್ರದಲ್ಲಿಯೇ ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಯಜಮಾನ್ ಮಂಜಪ್ಪ, ಮೋಹನ್, ವಸಂತ, ಅಶೋಕ್, ಹರಿರಾಯನಹಳ್ಳಿ ಧರ್ಮೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.