ಬಿರುಗಾಳಿಗೆ ಬೆಂಡಾದ ದೇವತ್ಕಲ್ ಗ್ರಾಮಸ್ಥರು

| Published : May 25 2024, 12:56 AM IST

ಸಾರಾಂಶ

ಸುರಪುರ ತಾಲೂಕಿನ ದೇವತ್ಕಲ್‌ನಲ್ಲಿ ಮನೆಯುಲ್ಲಿರುವ ದವಸಧಾನ್ಯ ಸಂರಕ್ಷಣೆಗಾಗಿ ಮಹಿಳೆಯೊಬ್ಬರು ತಾಡಪಾಲು ಕಟ್ಟುತ್ತಿರುವುದು.

100ಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಜಖಂ । ನೆಲ ಕಚ್ಚಿದ ಪಪ್ಪಾಯಿ

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಸುಮಾರು 110ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಜಖಂಗೊಂಡಿದ್ದು, ವಿದ್ಯುತ್ ಕಂಬ, ಬೃಹತ್ ಮರಗಳು ಹಾಗೂ ಪಪ್ಪಾಯ ಬೆಳೆ ಧರೆಗುರುಳಿರುವ ಘಟನೆ ನಡೆದಿದೆ.ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆಗಳ ತಗಡಿನ ಮೇಲೆ ಹಾಕಿದ ಬೃಹತ್ ಕಲ್ಲುಗಳು, ತಗಡುಗಳು ಚೂರು ಚೂರಾಗಿ ಕೆಳಗೆ ಬಿದ್ದಿವೆ. ಮನೆಯಲ್ಲಿದ್ದ ದಿನಸಿ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು. ಟಿವಿ, ಪ್ರಿಡ್ಜ್, ಫ್ಯಾನ್‌ ಸಂಪೂರ್ಣ ಹಾನಿಯಾಗಿವೆ. ನೆಲ ಕಚ್ಚಿದ ಪಪ್ಪಾಯ: ದೇವತ್ಕಲ್‌ ವ್ಯಾಪ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಎಕರೆಯಲ್ಲಿ ಪಪ್ಪಾಯಿ ಬೆಳೆಯಲಾಗಿತ್ತು. ಫಲ ಕೀಳುವ ಹಂತದಲ್ಲೇ ಬಿರುಗಾಳಿಗೆ ನೆಲ ಕಚ್ಚಿದ್ದು, ಇದರಿಂದ ಗ್ರಾಮದ ರೈತರಾದ ಹಣಮಂತ್ರಾಯ ಘಂಟಿ, ರಂಗಣ್ಣ ಹಾಲಬಾವಿ, ತಿರುಪತಿ, ಮಲ್ಲಣ್ಣ ಪಕ್ಕನವರ್, ನಿಂಗಣ್ಣ, ಶಂಕ್ರಣ್ಣ ಬಂಟನೂರು ಸೇರಿದಂತೆ ಹಲವು ರೈತರಿಗೆ ನಷ್ಟಉಂಟಾಗಿದೆ.

ಮನೆಗಳಿಗೆ ಹಾನಿ: ಬಿರುಗಾಳಿಗೆ ಗ್ರಾಮದಲ್ಲಿರುವ ಶ್ರೀನಿವಾಸ ಘಂಟಿ, ಶ್ರೀದೇವಿ, ಶಿವರಾಜ ಬೈಚಬಾಳ, ಲಕ್ಷ್ಮಣ ನಾವದಗಿ, ನೂರಜಾನ್ ಬಿ, ಸೂರ್ಯಕಾಂತಮ್ಮ, ರಾಮಣ್ಣ ತಳವಾರ್, ಅಂಬರೀಷ್ ನಾವದಗಿ, ದೇವಕ್ಕೆಮ್ಮ ಹಮಾಲಿ, ಮಂಜಮ್ಮ ನಿಂಗಪ್ಪ, ಶ್ರೀನಿವಾಸ ಯಾದವ ಇವರ ಮನೆಗಳಿಗೆ ಭಾರೀ ಹಾನಿಯಾದರೆ ಇತರೆ ಮನೆಗಳಿಗೆ ಲಘು ಹಾನಿಯಾಗಿದೆ. * ನೀರಿನ ಕೊರತೆ: ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೃಹತ್ ಮರಗಳು ಬಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ.

* ಹಾರಿದ ಮೇಲ್ಛಾವಣಿ: ಗ್ರಾಮದ ಮುಖ್ಯರಸ್ತೆಯಲ್ಲಿರುವ ಹಲವು ಹೋಟೆಲ್, ಪಾನಿಪುರಿ ಸಣ್ಣಪುಟ್ಟ ಅಂಗಡಿಗಳ ಮೇಲ್ಭಾಗದಲ್ಲಿ ಹಾಕಿದ್ದ ತಗಡುಗಳು ಹಾರಿ ಹೋಗಿವೆ. ಅಂಗಡಿಗಳಿಗೆ ಅಳವಡಿಸಿದ್ದ ನಾಮಫಲಕಗಳಂತು ಕಿತ್ತು ರಸ್ತೆಗೆ ಬಿದ್ದಿವೆ. ಟ್ರ‍್ಯಾಕ್ಟರ್ ಜಖಂ: ಗ್ರಾಮದ ಗೋವಿಂದಪ್ಪ ಲಕ್ನಾಪುರ ಅವರ ಟ್ರಾಕ್ಟರ್‌ ಮೇಲೆ ಬೃಹತ್‌ ಮರ ಬಿದ್ದು ಜಖಂಗೊಂಡಿದೆ. ಜೀವನಕ್ಕೆ ಆಸರೆಯಾಗಿದ್ದ ಟ್ರಾಕ್ಟರ್‌ ಹಾನಿಗೊಳಗಾಗಿದ್ದರಿಂದ ರೈತನಿಗೆ ದಿಕ್ಕು ತೋಚದಂತಾಗಿದೆ.

ಕಾಂಗ್ರಸ್‌ನಿಂದ ಪ್ರತ್ಯೇಕ ವರದಿ ಸಲ್ಲಿಕೆ: ಯೂತ್‌ ಕಾಂಗ್ರಸ್‌ ಘಟಕದ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ ನಾಯಕ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸುರುಪುರ ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ಜನರ ಆಸ್ತಿಗಳಿಗೆ ಅಪಾರ ಹಾನಿ ಉಂಟಾಗಿದೆ. ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ನಷ್ಟ ಸರ್ವೇ ಮಾಡಲಾಗುತ್ತಿದೆ. ಅಲ್ಲದೆ ಕಾಂಗ್ರೆಸ್‌ನಿಂದಲೂ ಸರ್ವೇ ನಡಿಸಿ ಪ್ರತ್ಯೇಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಜನರಿಗೆ ಪರಿಹಾರ ಒದಗಿಸುತ್ತೇವೆ ಎಂದು ತಿಳಿಸಿದರು.