ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಗೋಪಿನಾಥಂ ಗ್ರಾಮಸ್ಥರು ಪ್ರತಿಭಟನೆ

| Published : Aug 19 2024, 12:50 AM IST

ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಗೋಪಿನಾಥಂ ಗ್ರಾಮಸ್ಥರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಬದಲಾಯಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕಂಪ್ಯೂಟರ್‌ ಆಪರೇಟರ್‌ ಬದಲಾಯಿಸುವಂತೆ ಒತ್ತಾಯ । ಲಿಖಿತ ಮನವಿ ಸಲ್ಲಿಸಿದರೂ ಅಧಿಕಾರಿಗಳ ಸ್ಪಂದನೆ ಇಲ್ಲ

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಬದಲಾಯಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಪ್ಯೂಟರ್ ಆಪರೇಟರ್ ಕುಬೇಂದ್ರ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡುತ್ತಿಲ್ಲ. ತನಗೆ ಇಷ್ಟ ಬಂದವರಿಗೆ ಜಾಬ್ ಕಾರ್ಡ್ ಎಂಟ್ರಿ ಮಾಡುವುದು ನರೇಗಾ ಹಣ ಬಿಡುಗಡೆ ಮಾಡುವುದು ಸೇರಿದಂತೆ ಆಕ್ರಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ಬದಲಾವಣೆ ಮಾಡುವಂತೆ ಕಳೆದ ಒಂದು ವರ್ಷಗಳಿಂದಲೂ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಇವರನ್ನು ಬದಲಾವಣೆ ಮಾಡುವವರೆಗೂ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ನಡೆಸಿದರು.

ಇನ್ನು ಸರ್ಕಾರದ ಹಣ ಹಾಗೂ ಸ್ಥಳೀಯ ನಿವಾಸಿಗಳ ತೆರಿಗೆ ಹಣದಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಅಭಿವೃದ್ಧಿ ಮಾಡದೆ ಅರಣ್ಯದ ಒಳಗೆ ಇರುವ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಗೆ ಅನುಕೂಲವಾಗುತ್ತಿದೆ, ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಒಂದು ರುಪಾಯಿಯೂ ಅನುದಾನ ನೀಡುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನಮಗೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿರುವಾಗ ನಾವು ಏಕೆ ಅವರಿಗೆ ಸಹಕಾರ ನೀಡಬೇಕು, ಅವರು ನಮ್ಮ ಜನರಿಗೆ ತೊಂದರೆ ಕೊಡುತ್ತಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗುತ್ತಿಲ್ಲ. ಈ ಕೂಡಲೇ ಅರಣ್ಯದಲ್ಲಿ ನಡೆಯುವ ಕಾಮಗಾರಿಗಳನ್ನು ನಿಲ್ಲಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಗ್ರಾಮದ ಮುಖಂಡ ಸೆಂದಿಲ್ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಹೆಚ್ಚು ಸದಸ್ಯರು ನರೇಗಾ ಯೋಜನೆಯಡಿ ಕಾಮಗಾರಿ ಮಾಡುತ್ತಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಕಂಪ್ಯೂಟರ್ ಆಪರೇಟರ್ ಕುಬೇಂದ್ರ ಬಾಪೂಜಿ ಸೇವಾಕೇಂದ್ರದಲ್ಲಿ ಕೊಡುವಂತಹ ಸೇವೆ, ವಸತಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದವರಿಗೆ ನರೇಗಾದಡಿಯಲ್ಲಿ ಕೂಲಿ ಪಾವತಿ, ವಸತಿ ಯೋಜನೆಯ ಜಿಪಿಎಸ್ ಮಾಡುವುದು,ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗೆ ಒತ್ತು ಕೊಡದೆ ಇರುವುದರಿಂದ ನಾಗರಿಕರು ಇವರ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದರು.

ನರೇಗಾ ಯೋಜನೆಯಡಿ ಅರಣ್ಯ ಪ್ರದೇಶದ ಒಳಗೆ ತಂಗವೇಲು, ಪೆರುಮಾಳ್ ಎಂಬ ಗುತ್ತಿಗೆದಾರರ ಪ್ರತಿ ಬಾರಿಯೂ ಯಾವುದೇ ಟೆಂಡರ್ ಕೆಲಸ ಮಾಡದೇ ತುಂಡು ಗುತ್ತಿಗೆ ರೀತಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜತೆ ಶಾಮೀಲಾಗಿ ಕಾಮಗಾರಿ ನಡೆಸುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಹಾಲಿ ಪಿಡಿಒಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜಕುಮಾರ್ ಗೋಪಿನಾಥಂ ಗ್ರಾಮದವರೇ ಆಗಿದ್ದು ಇವರು ಇದೇ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ಪ್ರಾರಂಭಿಸಿ, ಇದೀಗ ಗ್ರೇಡ್ 2 ಕಾರ್ಯದರ್ಶಿಯಾಗಿದ್ದಾರೆ. ಇವರಿಗೆ ಪ್ರಭಾರ ಪಿಡಿಒ ಹುದ್ದೆ ನೀಡಿರುವುದರಿಂದ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾ ಪಂಚಾಯಿತಿ ಹಿರಿಯಾ ಅಧಿಕಾರಿಗಳು ಈ ಗ್ರಾಮಕ್ಕೆ ಬೇರೆ ಪಿಡಿಒರನ್ನು ನೇಮಿಸಿ ಪ್ರಭಾರ ಪಿಡಿಒ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿ ರಾಜಕುಮಾರ್ ರನ್ನುಬೇರೆ ಗ್ರಾಮಕ್ಕೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.