ದೋಣಿಯಲ್ಲಿ ಬಂದು ಮತದಾನ ಮಾಡಿದ ಕೂರ್ವೆ ಗ್ರಾಮಸ್ಥರು

| Published : May 08 2024, 01:07 AM IST

ಸಾರಾಂಶ

ಅಂಕೋಲಾ ತಾಲೂಕಿನ ಹಿಚ್ಕಡದ ಕೂರ್ವೆ ಗ್ರಾಮಸ್ಥರಿಗೆ ಗಂಗಾವಳಿ ನದಿ ದಾಟಲು ಸೇತುವೆ ವ್ಯವಸ್ಥೆ ಇಲ್ಲದ ಕಾರಣ ದೋಣಿಯಲ್ಲಿ ನದಿ ದಾಟಿ, ಸುಮಾರು 1.5 ಕಿಮೀ ನಡೆದು ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.

ಕಾರವಾರ: ಕೂರ್ವೆ ಗ್ರಾಮಕ್ಕೆ ಸೇತುವೆ ಇಲ್ಲದ ಕಾರಣ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಮತದಾನಕ್ಕಾಗಿ ದೋಣಿ ಮೂಲಕ ಬಂದು ಇಲ್ಲಿನ ಜನತೆ ತಮ್ಮ ಹಕ್ಕು ಚಲಾಯಿಸಿದರು.

ಅಂಕೋಲಾ ತಾಲೂಕಿನ ಹಿಚ್ಕಡದ ಕೂರ್ವೆ ಗ್ರಾಮಕ್ಕೆ ಗಂಗಾವಳಿ ನದಿ ಆವೃತ್ತವಾಗಿದ್ದು, ಇದು ಕೇವಲ ಚುನಾವಣೆಯ ಮತದಾನದ ದಿನ ಉಂಟಾಗುವ ಸಮಸ್ಯೆಯಲ್ಲ. ಪ್ರತಿನಿತ್ಯದ ಸಂಚಾರಕ್ಕೆ ದೋಣಿಯನ್ನೇ ಅವಲಂಭಿಸಿದ್ದಾರೆ. ಇದೇ ಊರಿನ ಪಕ್ಕದ ಮಟ್ನಕುರ್ವೆಗೆ ತೂಗು ಸೇತುವೆ ನಿರ್ಮಾಣ ಮಾಡಲಾಗಿದ್ದು, ಆದರೆ ಕೂರ್ವೆಗೆ ಮಾತ್ರ ಸೇತುವೆ ಭಾಗ್ಯ ಸಿಕ್ಕಿಲ್ಲ.

ಮೂರು ತಲೆಮಾರಿನಿಂದ ದೋಣಿಯ ಮೂಲಕವೇ ಸಂಚಾರ ಮಾಡುತ್ತಿದ್ದು, ಕೂರ್ವೆ ಗ್ರಾಮದಲ್ಲಿ ೫ನೇ ತರಗತಿ ವರೆಗೆ ಮಾತ್ರ ಶಾಲೆಯಿದೆ. ಹೆಚ್ಚಿನ ವ್ಯಾಸಂಗಕ್ಕಾಗಿ ಅಂಕೋಲಾಕ್ಕೆ ಬರುವ ಪರಿಸ್ಥಿತಿಯಿದ್ದು, ಪ್ರತಿನಿತ್ಯ ಮಕ್ಕಳು ಶಾಲೆಗೆ ತೆರಳಲು, ಮನೆಗೆ ಬರಲು ದೋಣಿಯೇ ಆಧಾರವಾಗಿದೆ. ಕೂರ್ವೆ ಗ್ರಾಮದ ಶಾಲೆಗೆ ಪಾಠ ಮಾಡಲು ಶಿಕ್ಷಕರು ನಿಯೋಜನೆಗೊಂಡಿದ್ದು, ತೆರಳಬೇಕಿದ್ದರೆ ದೋಣಿಯೇ ಸಂಪರ್ಕ ಸೇತುವೆಯಾಗಿದೆ.

ಈ ಗ್ರಾಮದಲ್ಲಿ ೪೦ ಮನೆಗಳಿದ್ದು, ದಾಂಡೆಬಾಗಕ್ಕೆ ದೋಣಿಯಲ್ಲಿ ಬಂದ ಬಳಿಕ ಒಂದುವರೆ-ಎರಡು ಕಿಮೀ ನಡೆದುಕೊಂಡು ಹಿಚ್ಕಡ ಶಾಲೆಗೆ ಮತದಾನಕ್ಕೆ ಬರಬೇಕು. ಇದಲ್ಲದೇ ದಾಂಡೇಬಾಗದಲ್ಲಿ ಕೂಡಾ ೬೦-೬೫ ಮತಗಳಿದ್ದು, ಇವರೂ ಇಲ್ಲಿಗೆ ಬರಬೇಕಾಗುತ್ತದೆ. ಮೀನುಗಾರಿಕೆ ಹಾಗೂ ಕೂಲಿಯೇ ಜೀವನೋಪಾಯವಾಗಿದೆ. ಕೂಲಿ ಮಾಡಲು ಅಂಕೋಲಾದತ್ತ ಬರಲು ದೋಣಿ ಏರಬೇಕಿದೆ. ಪ್ರತಿಮನೆಯಲ್ಲೂ ಚಿಕ್ಕದಾದ ದೋಣಿಯಿದ್ದು, ಅದನ್ನೇ ತೆಗೆದುಕೊಂಡು ದ್ವೀಪದಿಂದ ಆಗಮಿಸುತ್ತಾರೆ. ಹಲವಾರು ಬಾರಿ ಸೇತುವೆ ನಿರ್ಮಾಣಕ್ಕೆ ಮನವಿ ನೀಡಿದ್ದರೂ ಕೂಡಾ ಜನಪ್ರತಿನಿಧಿಗಳು ಇತ್ತಕಡೆ ಗಮನ ನೀಡುತ್ತಿಲ್ಲ. ದೋಣಿ ವ್ಯವಸ್ಥೆ ಇಲ್ಲ..

ಜಿಲ್ಲಾ ಚುನಾವಣಾ ಆಯೋಗ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮನೆಯಿಂದ ಮತದಾನ, ಜತೆಗೆ ಮತಗಟ್ಟೆಗೆ ಬಂದು ಮತದಾನ ಮಾಡುವ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ವಾಹನದ ವ್ಯವಸ್ಥೆ ಮಾಡಿದೆ. ಆದರೆ ಈ ಕೂರ್ವೆ ಗ್ರಾಮಕ್ಕೆ ಚುನಾವಣಾ ಸಂದರ್ಭದಲ್ಲಾಗಲಿ ಅಥವಾ ಶಾಶ್ವತವಾಲಿ ಒಂದು ದೋಣಿಯ ವ್ಯವಸ್ಥೆ ಮಾಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.ಕೂರ್ವೆಗೆ ಸೇತುವೆ ನಿರ್ಮಿಸಲು ಯಾರೂ ಮುಂದಾಗುತ್ತಿಲ್ಲ. ಪ್ರತಿನಿತ್ಯ ಶಾಲೆಗೆ ತೆರಳುವ ಮಕ್ಕಳು, ಶಿಕ್ಷಕರು, ಕೆಲಸಕ್ಕೆ ತೆರಳುವವರು ಪಾತಿದೋಣಿಯನ್ನೇ ಅವಲಂಬಿಸಿದ್ದಾರೆ. ಕೂರ್ವೆಗೆ ಹೋಗಲು ದಾಂಡೆಬಾಗಕ್ಕೆ ಬಂದಾಗ ಕೆಲವೊಮ್ಮೆ ದೋಣಿಯೇ ಇರುವುದಿಲ್ಲ. ತಾಸುಗಟ್ಟಲೆ ಕಾಯಬೇಕಾಗುತ್ತದೆ ಎಂದು ಕೂರ್ವೆ ಗ್ರಾಮಸ್ಥ ಬೀರಾ ಹರಿಕಂತ್ರ ಹೇಳುತ್ತಾರೆ.