ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಖಾಸಗಿ ವ್ಯಕ್ತಿಯೊಬ್ಬರು ಗೌರಾಪುರ-ಲಾಲನಕಟ್ಟೆ ಕೆರೆ ಜಮೀನಿಗೆ ಮಣ್ಣು ಹಾಕಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾನೆಂದು ಆರೋಪಿಸಿ ಆತನ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಸೋಂಪುರ ಹೋಬಳಿಯ ಗೌರಾಪುರ-ಲಾಲನಕಟ್ಟೆ ಕೆರೆಯಂಗಳದಲ್ಲಿ ಅದೇ ಗ್ರಾಮದ ರಾಜಪ್ಪ ಕೆರೆ ಒತ್ತುವರಿ ಮಾಡಿಕೊಳ್ಳುವ ಸಲುವಾಗಿ ಟ್ರ್ಯಕ್ಟರ್ ಹಾಗೂ ಜೆಸಿಬಿಗಳಿಂದ ಮಣ್ಣು ಸುರಿದು ಅಚ್ಚುಕಟ್ಟು ಮಾಡುತ್ತಿದ್ದಾರೆಂದು ಆರೋಪಿಸಿ ಗೌರಾಪುರ ಹಾಗೂ ಐಸಾಮಿಪಾಳ್ಯದ ಗ್ರಾಮಸ್ಥರು ಮಣ್ಣು ಸುರಿಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಕೆರೆ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಿ 112 ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು.
ಖಾಸಗಿ ವ್ಯಕ್ತಿ ರಾಜಪ್ಪ ಹಾಗೂ ಗ್ರಾಮಸ್ಥರ ನಡುವಿನ ವಿವಾದದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕೆರೆಯಂಗಳಕ್ಕೆ ಮಣ್ಣು ಸುರಿಯುತ್ತಿದ್ದುದನ್ನು ತಡೆದು 2 ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿಯನ್ನು ವಶಕ್ಕೆ ಪಡೆದು ದಾಬಸ್‍ಪೇಟೆ ಪೊಲೀಸ್ ಠಾಣೆಗೆ ತರುವಂತೆ ತಿಳಿಸಿದರು.ಪೊಲೀಸರ ವಿರುದ್ದ ಗ್ರಾಮಸ್ಥರ ಅಸಮಾಧಾನ: ಘಟನೆ ನಡೆದು ಮೂರು ಗಂಟೆಯಾದರೂ ವಶಕ್ಕೆ ಪಡೆದ ಎರಡು ಟ್ರಾಕ್ಟರ್ ಗಳು ಹಾಗೂ ಜೆಸಿಬಿಯನ್ನು ಪೊಲೀಸ್ ಠಾಣೆಯ ಬಳಿ ತರದಿದ್ದಕ್ಕೆ ಗ್ರಾಮಸ್ಥರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು.
ರಾಜಪ್ಪ ಮಾತನಾಡಿ, ಇದು ಸರ್ಕಾರಿ ಗೋಮಾಳವಾಗಿದ್ದು, ನಾನು ಹಲವು ವರ್ಷಗಳಿಂದ ಈ ಜಾಗದಲ್ಲಿ ಉಳುಮೆ ಮಾಡುತ್ತಿದ್ದೇನೆ. ಜಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ನನ್ನ ಹೆಸರಿಗೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ವಿವರಿಸಿದರು.ಗ್ರಾಮಸ್ಥರು ಮಾತನಾಡಿ, ರಾಜಪ್ಪ ಕೆರೆಯಂಗಳ ಒತ್ತುವರಿ ಮಾಡಿಕೊಂಡು ಈಗಾಗಲೇ ಇಲ್ಲಿ ತೆಂಗಿನ ಗಿಡಗಳನ್ನು ನೆಟ್ಟಿದ್ದರು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕಿತ್ತುಹಾಕಿ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಿದ್ದರೂ ಮತ್ತೆ ಒತ್ತುವರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.