ದೌಲತ್‌ಪುರ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಹಾಗೂ ಉರ್ದು ಮಾಧ್ಯಮ ಶಾಲೆಗಳನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡುವುದಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.

ಸಂಡೂರು: ತಾಲೂಕಿನ ದೌಲತ್‌ಪುರ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಹಾಗೂ ಉರ್ದು ಮಾಧ್ಯಮ ಶಾಲೆಗಳನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡುವುದಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.

ಎಐಡಿಎಸ್‌ಒ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಸೋಮವಾರ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆ ನಡೆಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಪೋಷಕರು ತಮ್ಮ ಮಕ್ಕಳನ್ನು ಗ್ರಾಮದಲ್ಲಿರುವ ಶಾಲೆಗೆ ದಾಖಲು ಮಾಡಬೇಕು ಎಂಬ ಸಂದೇಶವುಳ್ಳ ಬ್ಯಾನರ ಅನ್ನು ಶಾಲೆಯ ಮುಂದೆ ಕಟ್ಟಲಾಯಿತು.

ಶಾಲೆ ಮುಚ್ಚಿದಲ್ಲಿ ತಳ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯು ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ ಹೊಂದಿರುವ ಯೋಜನೆಯಾಗಿದೆ. ಇದರ ವಿರುದ್ಧ ನಮ್ಮ ಹೋರಾಟವಾಗಿದೆ. ಸರ್ಕಾರ ಜನರ ವಿರೋಧದ ನಡುವೆಯೂ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದು, ಬಡವರ ಮಕ್ಕಳ ಶಾಲೆ ಮುಚ್ಚಲು ಮುಂದಾಗಿದೆ. ಗ್ರಾಮದ ಶಾಲೆಗಳಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಶಾಲೆ ಮುಚ್ಚುವುದು ಹೀನ ಕೃತ್ಯವಾಗಿದೆ. ಈ ಶಾಲೆಗೆ ಅಗತ್ಯ ಮೂಲ ಸೌಕರ್ಯಗಳು, ಶಿಕ್ಷಕರನ್ನು ನೇಮಿಸಿ ಉತ್ತಮ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕು. ಇದನ್ನು ಮೀರಿ ಶಾಲೆಯನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡಿದಲ್ಲಿ, ಗ್ರಾಮಸ್ಥರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎಸ್.ಜಿ ನಾಗರತ್ನಾ, ಗ್ರಾಮದ ಮುಖಂಡರಾದ ಸತ್ಯವತಿ, ಸುಭಾನಿ, ಸೇವಂತಿ, ಸರಸ್ವತಿ, ತನುಶ್ರೀ, ಷಣ್ಮುಖ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.