ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರಾಗಿರುವ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ವರದಿ ನೀಡಲು ಬಂದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಾಮಾಜಿಕ ಹೋರಾಟಗಾರರು, ದಲಿತ ಮುಖಂಡರು ಹಾಗೂ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.ತಾಲೂಕಿನ ಸಾತನೂರು ಹೋಬಳಿಯ ಕಬ್ಬಾಳು ಗ್ರಾಪಂ ವ್ಯಾಪ್ತಿಯ ಸೂರನಹಳ್ಳಿ ಸರ್ವೇ ನಂ. ೧೭ರಲ್ಲಿ ಸರ್ಕಾರಿ ಗೋಮಾಳದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಹತ್ತು ಎಕರೆ ಭೂಮಿ ಮಂಜೂರು ಆಗಿತ್ತು. ಆ ಜಾಗದಲ್ಲಿ ಘಟಕ ನಿರ್ಮಾಣ ನೆಪದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಅವರ ಆದೇಶದಂತೆ ತಹಸೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಸರ್ವೇ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ದೂರುದಾರರ ಸಮಕ್ಷಮದಲ್ಲಿ ಸ್ಥಳ ಮಹಜರು ನಡೆಸಲು ಭೇಟಿ ಕೊಟ್ಟಿದ್ದರು.
ದೂರುದಾರ ರವಿಕುಮಾರ್ ಕಂಚನಹಳ್ಳಿ ಮಾತನಾಡಿ, ಸರ್ಕಾರಿ ಹಳ್ಳದ ಗಡಿಯಿಂದ 15 ಮೀಟರ್, ಕೆರೆಯ ಗಡಿಯಿಂದ 3೦ ಮೀಟರ್ ಬರ್ ರೆನ್‌ನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದರೆ ಘಟಕ ನಿರ್ಮಾಣ ಮಾಡುತ್ತಿರುವ ಜಾಗದ ಸುತ್ತಲೂ ನಾಲ್ಕರಿಂದ ಐದು ಕೆರೆಗಳಿವೆ. ಘಟಕ ನಿರ್ಮಾಣ ಉದ್ದೇಶಿತ ಸ್ಥಳ ಬರ್ ರೆನ್ ವ್ಯಾಪ್ತಿಯಲ್ಲಿ ಬರುತ್ತದೆ, ಪಕ್ಕದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿದೆ, 3೦೦ ಮೀಟರ್ ದೂರದಲ್ಲಿ ಗ್ರಾಮ ಇದೆ. ಈ ಜಾಗದಲ್ಲಿ ಹೇಗೆ ಘಟಕ ನಿರ್ಮಾಣ ಮಾಡುತ್ತೀರಿ ಎಂದು ಪ್ರಶ್ನಿಸಿದರು.ಈ ಜಾಗವು ಘಟಕ ನಿರ್ಮಾಣ ಮಾಡಲು ಸೂಕ್ತವಲ್ಲ, ಹೀಗಿದ್ದರೂ ಕೂಡ ಸ್ಥಳೀಯ ಆರ್‌ಐ ಮತ್ತು ವಿಎಗಳು ಇಲ್ಲಿ ಯಾವುದೇ ಗ್ರಾಮ, ಕೆರೆಕಟ್ಟೆಗಳು ಇಲ್ಲ ,ಈ ಜಾಗ ಸಮತಟ್ಟಾಗಿದೆ ಎಂದು ಜಿಲ್ಲಾಡಳಿತಕ್ಕೆ ತಪ್ಪು ವರದಿ ಸಲ್ಲಿಸಿ 10 ಎಕರೆ ಜಮೀನು ಮಂಜೂರು ಮಾಡಿಕೊಂಡಿದ್ದಾರೆ. ಇದೇ ಜಾಗದಲ್ಲಿ ಕಸ ವಿಲೇವಾರಿ ಘಟಕ ನೆಪದಲ್ಲಿ ಸ್ಥಳೀಯ ಪ್ರಭಾವಿಗಳು ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆ. ಭೂಮಿ ಸಮತಟ್ಟು ಮಾಡಲು ನರೇಗಾ ಹಣವನ್ನು ಸಹ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಘಟಕಕ್ಕೆ 10 ಎಕರೆ ಜಾಗವೇಕೆ?:ಸ್ಥಳ ಮಹಜರು ನಡೆಸಲು ಬಂದ ಅಧಿಕಾರಿಗಳನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್, ಗೌರಮ್ಮ ಸೇರಿದಂತೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಸ ವಿಲೇವಾರಿ ಘಟಕಕ್ಕೆ ಮಂಜೂರಾಗಿರುವ ಜಾಗದಲ್ಲಿ ಹಲವಾರು ರೈತರು ಸಾಗುವಳಿ ಮಾಡುತ್ತಿದ್ದಾರೆ. ಆರಂಭದಲ್ಲಿ ೫ ಎಕರೆ ಮಂಜೂರಾತಿಗೆ ವರದಿ ಸಲ್ಲಿಸಿ ಈಗ 10 ಎಕರೆ ಮಂಜೂರು ಮಾಡಿಕೊಂಡಿದ್ದು, ಘಟಕ ನಿರ್ಮಾಣ ಮಾಡಲು 1೦ ಎಕರೆ ಯಾಕೆ? ನಾಲ್ಕು ಗುಂಟೆ ಜಾಗದಲ್ಲಿ ನಿರ್ಮಾಣ ಮಾಡಬಹುದು, ಹೀಗಿರುವಾಗ ಇಲ್ಲಿರುವ ಸಂಪತ್ತನ್ನು ಲೂಟಿ ಹೊಡೆಯಲೆಂದೇ 10 ಎಕರೆ ಜಾಗ ಮಂಜೂರು ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಘಟಕ ನಿರ್ಮಾಣ ನೆಪದಲ್ಲಿ ಆಕ್ರಮ ಗಣಿಗಾರಿಕೆ:ಅಧಿಕಾರಿಗಳು ಪರಿಶೀಲನೆ ನಡೆಸಿ, ಸ್ಥಳ ಮಹಜರು ವೇಳೆ ಹಲವಾರು ರೈತರು ಹೇಳಿಕೆ ನೀಡಿ, ಜಾಗದ ಸುತ್ತಲೂ ಹಲವು ಗ್ರಾಮಗಳು, ಕೃಷಿ ಚಟುವಟಿಕೆ ಭೂಮಿ ಇದ್ದು, ಈ ಜಾಗದಲ್ಲಿ ಘಟಕ ನಿರ್ಮಾಣ ಮಾಡಲು ನಮ್ಮ ವಿರೋಧವಿದೆ, ಘಟಕ ನಿರ್ಮಾಣ ಮಾಡುವ ನೆಪದಲ್ಲಿ ಹೊಸ ಕಬ್ಬಾಳು ಶಿವರಾಜು, ಬಿನ್ ಚೊಟ್ಟಯ್ಯ, ತಮ್ಮಯ್ಯ, ಬಿನ್ ಮರಿಗೌಡ, ದಿನೇಶ್, ಬಿನ್ ಕರಿಯಪ್ಪ, ಕುರುಬಳ್ಳಿ ದೊಡ್ಡಿ ಶಂಕರ್, ಬಿನ್ ನಿಂಗೇಗೌಡ ಇವರು ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಮಹಜರು ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಮಂಜುನಾಥ್, ಜಿಲ್ಲಾ ಪಂಚಾಯ್ತಿ ಎಇಇ ಚಂದ್ರಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಲಿಂಗರಾಜು, ಭೂ ವಿಜ್ಞಾನಿ ನಂದಿನಿ, ಇಒ ಭೈರಪ್ಪ, ಉಪ ತಹಸೀಲ್ದಾರ್ ಪ್ರವೀಣ್ ಕುಮಾರ್, ತಾಲೂಕು ಸರ್ವೇಯರ್ ಮಹೇಶ್, ಶಂಕರ್, ಪಿಡಿಒ ಲೋಕೇಶ್, ಸಿಪಿಐ ಕೃಷ್ಣ ಲಮಾಣಿ, ಸಾತನೂರು ಪಿಎಸ್‌ಐ ಹರೀಶ್, ಆರ್‌ಎಪ್ ಒ ರವಿ, ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಗೌರಮ್ಮ, ಪಾರ್ವತಮ್ಮ, ಜಿಲ್ಲಾಧ್ಯಕ್ಷ ವೆಂಕಟಾಚಲ, ಯುವ ಘಟಕದ ಅಧ್ಯಕ್ಷ ಜಯಂತ್, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಸೇರಿದಂತೆ ಸೂರನಹಳ್ಳಿ,ಇಂದಿರಾ ನಗರ, ಬಾಪೂಜಿ ಕಾಲೋನಿ, ಕಂಸಾಗರ ಗ್ರಾಮಸ್ಥರು ಉಪಸ್ಥಿತರಿದ್ದರು.