ಕೋಟಹಳ್ಳಿಯಲ್ಲಿ ಮಳೆ ಬಾರದೇ ಕಂಗಲಾದ ರೈತಾಪಿ ಜನತೆ ಮಳೆಗಾಗಿ ಪ್ರಾರ್ಥಿಸಿ ಜಾನಪದ ಸಂಸ್ಕೃತಿಯ ನಂಬುಗೆಯಲ್ಲಿ ಮಕ್ಕಳಿಗೆ ಚಂದಮಾಮನ ಹೆಸರಿನಲ್ಲಿ ಮದುವೆ ಮಾಡಿ ಶ್ರದ್ಧೆಯಿಂದ ಆಚರಿಸಿದರು. ಕಳೆದೆರಡು ವರ್ಷದಿಂದ ಮಳೆ ಬಾರದೆ ಸಾಲ ಮಾಡಿಕೊಂಡು ರೈತರು ಬದುಕುವಂತಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೋಟಹಳ್ಳಿಯಲ್ಲಿ ಮಳೆ ಬಾರದೇ ಕಂಗಲಾದ ರೈತಾಪಿ ಜನತೆ ಮಳೆಗಾಗಿ ಪ್ರಾರ್ಥಿಸಿ ಜಾನಪದ ಸಂಸ್ಕೃತಿಯ ನಂಬುಗೆಯಲ್ಲಿ ಮಕ್ಕಳಿಗೆ ಚಂದ ಮಾಮನ ಹೆಸರಿನಲ್ಲಿ ಮದುವೆ ಮಾಡಿ ಶ್ರದ್ಧೆಯಿಂದ ಆಚರಿಸಿದರು.ಗ್ರಾಮದಲ್ಲಿ ಮಳೆರಾಯನ ಪ್ರಾರ್ಥಿಸಿ ಮಾಡಲಾದ ವಿಶೇಷ ಪೂಜೆ, ಮದುವೆಯಲ್ಲಿ ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಂಡು ಕಳೆದೆರಡು ವರ್ಷದಿಂದ ಮಳೆ ಬಾರದೆ ಸಾಲ ಮಾಡಿಕೊಂಡು ರೈತರು ಬದುಕುವಂತಾಗಿದೆ.
ಸಾವಿರ ಅಡಿ ಭೂಮಿ ಕೊರೆಸಿದರೂ ಬೋರ್‌ವೆಲ್‌ಗಳಲ್ಲಿ ನೀರಿಲ್ಲವಾಗಿದೆ. ಈ ಬಾರಿ ರೈತರು ಬೆಳೆ ಬೆಳೆಯಲಾರದೆ ಬೇಸತ್ತಿರುವ ಪರಿಣಾಮ ಜಾನಪದ ನಂಬುಗೆಯಂತೆ ಮಳೆಗಾಗಿ ಪ್ರಾರ್ಥಿಸಿ ಸಾಂಪ್ರದಾಯಿಕ ಪೂಜೆ ಮತ್ತಿತರ ಆಚರಣೆ ಹಮ್ಮಿಕೊಂಡಿದ್ದರು.ಮಳೆ ಬಿದ್ದು ಕೆರೆಕಟ್ಟೆ ತುಂಬಲಿ. ಜನಜಾನುವಾರು ನೆಮ್ಮದಿಯಿಂದ ಬದುಕಬೇಕಿದೆ. ಸಂಕಷ್ಟದಲ್ಲಿರುವ ರೈತ ಸಾಲದ ಹೊರೆಯಿಂದ ದೂರವಾಗಬೇಕಿದೆ. ವರುಣದೇವ ಮಳೆ ಕೃಪೆ ತೋರಲಿ. ಭಗವಂತನ ಕರುಣೆ ರೈತರ ಮೇಲೆ ದೊರೆಯಲಿ ಎಂದು ಗ್ರಾಮಸ್ಥರು ವರುಣ ದೇವನಲ್ಲಿ ಪ್ರಾರ್ಥಿಸಿಕೊಂಡರು.
ಗ್ರಾಮದಲ್ಲಿನ ಮಕ್ಕಳನ್ನು ಒಂದೆಡೆ ಕಲೆ ಹಾಕಿ ಮದುವೆ ಶಾಸ್ತ್ರ ಮಾಡಲು ಸಜ್ಜಾದರು. ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರನ್ನುಗಂಡು ಮಕ್ಕಳನ್ನೆ ಆಯ್ಕೆ ಮಾಡಲಾಯಿತು. ಮದು ಮಗ ಪ್ರಥಮ್‌ಗೆ ಮೈಸೂರು ಪೇಟ, ಶುಭ್ರ ಬಿಳಿಯ ಶಲ್ಯ, ಕಚ್ಚೆ, ಅಂಗಿ ತೊಡಿಸಿದರು. ಮನ್ವಿತ್‌ಗೆ ಮದುಮಗಳಾಗಿ ಸೀರೆ ಕುಪ್ಪಸ, ಬಳೆ, ಒಡವೆ ವಸ್ತ್ರ ಆಭರಣ ತೊಡಿಸಿ ಶೃಂಗರಿಸಿದರು.ಗ್ರಾಮದ ಹಿರಿಯರು ಮದುವೆಗಾಗಿ ವರ, ವಧುಪೂಜೆ ನೆರವೇರಿಸಿದರು. ನಂತರ ಪ್ರಮುಖ ಬೀದಿಯಲ್ಲಿ ಬಿಜುಗಿನ ಪೆಟ್ಟಿಗೆಯೊಂದಿಗೆ ಹಿರಿಯರು ಮೆರವಣಿಗೆಯಲ್ಲಿ ಸಾಗಿದರು. ಮದುವೆಗೆ ಮುನ್ನ ಮೂರು ದಿನಗಳವರೆಗೆ ಮನೆ ಮನೆಗಳಿಗೆ ತೆರಳಿ ಮಕ್ಕಳು ರಾಗಿ ರೊಟ್ಟಿ ಹಿಟ್ಟನ್ನು ತಂದು ಒಂದೆಡೆ ಕಲೆಹಾಕಿ ರೊಟ್ಟಿ ತಯಾರಿಸಲು ಸಜ್ಜಾದರು. ನಾಲ್ಕೈದು ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ದಿನಕ್ಕೊಂದುರೊಟ್ಟಿ ಸಿಹಿ ಹೋಳಿಗೆ ತಯಾರಿಸಿದರು.
ರೊಟ್ಟಿಯ ಮೇಲೆ ಚಂದಿರನಚಿತ್ತಾರ ಬಿಡಿಸಿದರು. ಪರಸ್ಪರ ರೊಟ್ಟಿ ಕಸಿಯುವ ಸಾಂಪ್ರದಾಯಿಕ ಆಟವನ್ನು ಹಾಡಿದರು. ಅಂತಿಮವಾಗಿ ಒಂದೆಡೆ ಕಲೆತು ಮಳೆರಾಯನ ಕುರಿತು ಹಾಡಿದರು. ನೃತ್ಯ ಮಾಡಿ ‘ಉಯ್ಯೋ ಉಯ್ಯೋ ಮಳೆರಾಯ, ಬಾರೋ ಮಳೆರಾಯ, ಹೂವಿನ ತೋಟ, ಬಾಳೆತೋಟಕ್ಕೆ ನೀರಿಲ್ಲ’ಎಂದು ಕರೆದರು. ಪರಸ್ಪರ ನೀರು ಎರಚಾಡಿ ಸಂಭ್ರಮಿಸಿದರು. ಊರಿನ ಗ್ರಾಮಸ್ಥರು ಇದಕ್ಕೆ ಸಾಥ್ ನೀಡಿದರು.ಗ್ರಾಮದಲ್ಲಿ ಮದುವೆ ಸಮಾರಂಭದಂತೆ ನಗುತ್ತ ವಿವಿಧ ಶಾಸ್ತ್ರ, ತಾಳಿ ಶಾಸ್ತ್ರ ಎಲ್ಲವನ್ನು ಮಾಡಿ ಖುಷಿಪಟ್ಟರು. ಗ್ರಾಮದಲ್ಲಿನ ಎಲ್ಲ ಸಮಾಜದವರು ಒಗ್ಗಟ್ಟಿನಿಂದ ಭಾಗವಹಿಸಿ ಮದುವೆ ಶಾಸ್ತ್ರದೊಂದಿಗೆ ಚಂದಮಾಮನ ಮದುವೆ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸಿದರು.