ಗುಂಡಿ ಬಿದ್ದ ರಸ್ತೆ ಮೇಲೆ ಗ್ರಾಮಸ್ಥರಿಂದ ಪೈರು ನಾಟಿ

| Published : Oct 07 2024, 01:31 AM IST

ಗುಂಡಿ ಬಿದ್ದ ರಸ್ತೆ ಮೇಲೆ ಗ್ರಾಮಸ್ಥರಿಂದ ಪೈರು ನಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಸತತವಾಗಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ತಾಲೂಕಿನ ಬೂದುಗುಪ್ಪೆ ಗ್ರಾಪಂ ವ್ಯಾಪ್ತಿಯ ಬರಡನಹಳ್ಳಿ ಗ್ರಾಮದ ಮುಖ್ಯ ರಸ್ತೆಗಳೆಲ್ಲ ಗುಂಡಿಗಳಿಂದ ನೀರು ತುಂಬಿ ಗದ್ದೆಯಂತಾಗಿವೆ. ರಸ್ತೆಯಲ್ಲಿ ಹೂವಿನ ಗಿಡ, ಭತ್ತದ ಪೈರು ನಾಟಿ ಮಾಡಿ ಜನರು ಹಿಡಿಶಾಪ ಹಾಕಿದ್ದಾರೆ.

ಕನಕಪುರ: ಸತತವಾಗಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ತಾಲೂಕಿನ ಬೂದುಗುಪ್ಪೆ ಗ್ರಾಪಂ ವ್ಯಾಪ್ತಿಯ ಬರಡನಹಳ್ಳಿ ಗ್ರಾಮದ ಮುಖ್ಯ ರಸ್ತೆಗಳೆಲ್ಲ ಗುಂಡಿಗಳಿಂದ ನೀರು ತುಂಬಿ ಗದ್ದೆಯಂತಾಗಿವೆ. ರಸ್ತೆಯಲ್ಲಿ ಹೂವಿನ ಗಿಡ, ಭತ್ತದ ಪೈರು ನಾಟಿ ಮಾಡಿ ಜನರು ಹಿಡಿಶಾಪ ಹಾಕಿದ್ದಾರೆ.

ನಗರದಿಂದ ಕೂಗಳತೆ ದೂರದಲ್ಲಿರುವ ಈ ಗ್ರಾಮಕ್ಕೆ ಹದಿನೇಳು ವರ್ಷಗಳಿಂದ ರಸ್ತೆಗೆ ಡಾಂಬರ್‌ ಹಾಕಿಲ್ಲ. ರಸ್ತೆಯ ಎಲ್ಲಾಕಡೆ ಹಳ್ಳ ಗುಂಡಿಗಳಿಂದ ಕೂಡಿದೆ, 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಸ್ತೆ ಅಭಿವೃದ್ಧಿ ಮಾಡಿದ್ದರು. ಆನಂತರ ಅಲ್ಲಿಂದ ಇಲ್ಲಿಯವರೆಗೂ ಯಾರೂ ರಸ್ತೆ ಅಭಿವೃದ್ಧಿ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದರು.

ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಗಮನಕ್ಕೆ ತಂದಿದ್ದೇವೆ. ಜವನಮ್ಮನದೊಡ್ಡಿ, ಬರಡನಹಳ್ಳಿ, ಸುಂಟರದೊಡ್ಡಿ ಸೇರಿದಂತೆ ಮೂರುವರೆ ಕೋಟಿ ರು. ವೆಚ್ಚದಲ್ಲಿ ಮೂರುವರೆ ಕಿ.ಮೀ. ಟೆಂಡರ್ ಆಗಿದೆ ಎಂದು ಆಶ್ವಾಸನೆಯಲ್ಲೇ ನಮ್ಮನ್ನು ಸಮಾಧಾನಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಗ್ರಾಮಕ್ಕೆ ಬಸ್ ವ್ಯವಸ್ಥೆಯಿಲ್ಲದೆ ಇರುವುದರಿಂದ ಮಕ್ಕಳು ಶಾಲಾ ಕಾಲೇಜಿಗೆ ಹೋಗಲು ಆಟೋ ರಿಕ್ಷಾಗಳನ್ನೇ ಕಾಯಬೇಕಾಗಿದೆ. ಗ್ರಾಮದ ಬಡ ಕೂಲಿಕಾರ್ಮಿಕರು ಉದ್ಯೋಗ ಹರಸಿ ಹಾರೋಹಳ್ಳಿ ಕೈಗಾರಿಕಾ ಕಾರ್ಖಾನೆಗಳಿಗೆ ಹೋಗಿ ಸಾಯಂಕಾಲ ವಾಪಸ್ ಬರಲು ಬಸ್ ವ್ಯವಸ್ಥೆಯಿಲ್ಲದೆ ಆಟೋ ರಿಕ್ಷಾಗಳನ್ನು ಕಾಯಬೇಕಾಗಿದೆ. ಆಟೋಗಳನ್ನು ಕರೆದರೆ ನಿಮ್ಮ ಗ್ರಾಮಕ್ಕೆ ಬರುವುದಿಲ್ಲ ರಸ್ತೆಗಳು ಹಾಳಾಗಿದೆ ಎನ್ನುತ್ತಾರೆ. ಇನ್ನು ಕೆಲವರು ತಲಾ ಒಬ್ಬರಿಗೆ ಐವತ್ತು ರು. ಕೇಳುತ್ತಾರೆ. ಪ್ರತೀ ದಿನ ಐವತ್ತು ರು. ಕೊಟ್ಟು ಆಟೋ ರೀಕ್ಷಾಗಳಲ್ಲಿ ಪ್ರಯಾಣಿಸಬೇಕಾಗಿದ್ದು, ಹೆಣ್ಣು ಮಕ್ಕಳಿಗೆ ಭದ್ರತೆಯಿಲ್ಲದಂತಾಗಿದೆ ಎಂದರು.

ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಓಡಾಡಲು ಶಾಲಾ ಕಾಲೇಜು ಮಕ್ಕಳು, ಕೂಲಿಕಾರ್ಮಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಇತ್ತ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.

ನವೆಂಬರ್ 5ರೊಳಗೆ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೇ ಹೋದರೆ, ಗ್ರಾಮಸ್ಥರುಗಳೆಲ್ಲ ಸೇರಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಅಲ್ಲದೇ, ಮುಂಬರುವ ಸ್ಥಳೀಯ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದರು.

ಮುಖಂಡರಾದ ಬಸವರಾಜ್, ಪ್ರಕಾಶ್, ದೀಪು, ಸಂಪತ್, ವೀರೇಶ್ ಹಾಗೂ ಸಾರ್ವಜನಿಕರು ಹಾಜರಿದ್ದರು.