ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ. ಸಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (೨೯) ನೆಟ್ಟಣ ಕಾಡಿನಲ್ಲಿ ಕೊಲೆಯಾಗಿ ಪತ್ತೆಯಾಗಿದ್ದು, ಮರಣೊತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬಿಳಿನೆಲೆ ಗ್ರಾ.ಪಂ. ಆವರಣದಲ್ಲಿ ಮೃತದೇಹವಿಟ್ಟು ಪ್ರತಿಭಟಿಸಿದರು. ಸಂದೀಪನನ್ನು ಓರ್ವನೇ ಕೊಲೆ ಮಾಡಿ ದುರ್ಗಮ ಕಾಡಿನಲ್ಲಿ ಹಾಕಲು ಸಾಧ್ಯವೇ ಇಲ್ಲ. ಕೊಲೆ ಪ್ರಕರಣದಲ್ಲಿ ಬೇರೆಯವರು ಇದ್ದಾರೆ, ಕೂಡಲೇ ಸಮಗ್ರ ತನಿಖೆ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಂದೀಪ್ ನಾಪತ್ತೆ ಬಗ್ಗೆ ಕುಟುಂಬಸ್ಥರು ನೀಡಿದ ನಾಪತ್ತೆ ದೂರನ್ನು ಸ್ವೀಕರಿಸಲು ಹಿಂದೇಟು ಹಾಕಿದ ಪೊಲೀಸರು, ಬಳಿಕ ಆರೋಪಿ ವಶಕ್ಕೆ ತೆಗೆದುಕೊಂಡರೂ ಶವ ಪತ್ತೆಹಚ್ಚಲು ಮುಂದಾಗಲಿಲ್ಲ. ಗ್ರಾಮಸ್ಥರ ಕುಟುಂಬಸ್ಥರ ಪ್ರತಿಭಟನೆಯ ಬಳಿಕ ಪೊಲೀಲಿಸರು ಎಚ್ಚೆತ್ತುಕೊಂಡಿದ್ದಾರೆ.
ಬಂಧಿತ ಆರೋಪಿ ಪ್ರತೀಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.