ಪ್ರಧಾನಿ ನರೇಂದ್ರ ಮೋದಿ ಅವರ ಆಶಯದ ಆರ್ಥಿಕ ಜೋಡಣೆ ಯೋಜನೆಯ ಉದ್ದೇಶವೇ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ತಲುಪಿಸುವುದಾಗಿದೆ. ಆದರೆ, ಹೆಗ್ಗಡಳ್ಳಿಯಲ್ಲಿರುವ ಬ್ಯಾಂಕ್ ಶಾಖೆಯನ್ನು ಸ್ಥಳಾಂತರಿಸುವುದರಿಂದ ಗ್ರಾಮೀಣ ಜನರಿಗೆ ಅನುಕೂಲ ಮಾಡುವ ಬದಲು ಅನಾನುಕೂಲ ಸೃಷ್ಟಿಸಿದಂತಾಗುತ್ತದೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಆರ್ಥಿಕ ಜೋಡಣೆ ಯೋಜನೆಯಡಿ ನಂಜನಗೂಡು ತಾಲೂಕಿನ ಹೆಗ್ಗಡಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಶಾಖೆಯನ್ನು ಹುಲ್ಲಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸುವುದನ್ನು ಖಂಡಿಸಿ ಹೆಗ್ಗಡಳ್ಳಿ, ಮೊಬ್ಬಳ್ಳಿ, ಕೊಂಗಳ್ಳಿ ಹಾಗೂ ಗಾಂಧಿ ಗ್ರಾಮದ ಜನರು ಗುರುವಾರ ಬ್ಯಾಂಕ್ ಶಾಖೆಯ ಮುಂದೆ ಪ್ರತಿಭಟಿಸಿದರು.2015ರಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೆಗ್ಗಡಳ್ಳಿ ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಬ್ಯಾಂಕ್ ಶಾಖೆಯನ್ನು ತೆರೆಯಲಾಗಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಬ್ಯಾಂಕಿಂಗ್ ಸೇವೆಗಾಗಿ ದೂರದ ನಂಜನಗೂಡಿಗೆ ತೆರಳುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಸೇವೆ ಪಡೆಯಲು ಅನುಕೂಲವಾಗಿತ್ತು. ಇದೀಗ ಶಾಖೆಯನ್ನು ಹುಲ್ಲಹಳ್ಳಿಗೆ ಸ್ಥಳಾಂತರಿಸಲು ಮುಂದಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಆರ್ಥಿಕ ಜೋಡಣೆ ಉದ್ದೇಶಕ್ಕೆ ಧಕ್ಕೆ:ಪ್ರಧಾನಿ ನರೇಂದ್ರ ಮೋದಿ ಅವರ ಆಶಯದ ಆರ್ಥಿಕ ಜೋಡಣೆ ಯೋಜನೆಯ ಉದ್ದೇಶವೇ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ತಲುಪಿಸುವುದಾಗಿದೆ. ಆದರೆ, ಹೆಗ್ಗಡಳ್ಳಿಯಲ್ಲಿರುವ ಬ್ಯಾಂಕ್ ಶಾಖೆಯನ್ನು ಸ್ಥಳಾಂತರಿಸುವುದರಿಂದ ಗ್ರಾಮೀಣ ಜನರಿಗೆ ಅನುಕೂಲ ಮಾಡುವ ಬದಲು ಅನಾನುಕೂಲ ಸೃಷ್ಟಿಸಿದಂತಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೇ ಹುಲ್ಲಹಳ್ಳಿ ಭಾಗದಲ್ಲಿ ವಿವಿಧ ಬ್ಯಾಂಕುಗಳ ಮೂರು-ನಾಲ್ಕು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ, ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗಿರುವ ಹೆಗ್ಗಡಳ್ಳಿ ಶಾಖೆಯನ್ನು ಸ್ಥಳಾಂತರಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಗ್ರಾಮಸ್ಥರು, ಶಾಖೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ಆರೋಪ:
ಬ್ಯಾಂಕ್ ಶಾಖೆಯನ್ನು ಸ್ಥಳಾಂತರಿಸುವ ಸಂಬಂಧ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.ಇಂತಹ ಕ್ರಮದಿಂದ ಗ್ರಾಮೀಣ ಜನರು ಬ್ಯಾಂಕಿಂಗ್ ಸೇವೆ ಪಡೆಯಲು ಮತ್ತೆ ದೂರದ ಊರುಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ಶಾಖೆ ಸ್ಥಳಾಂತರದ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಹೆಗ್ಗಡಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಬ್ಯಾಂಕ್ ಶಾಖೆಯನ್ನು ಸ್ಥಳಾಂತರಿಸದಂತೆ ಒತ್ತಾಯಿಸಿದರು. ನಂತರ ಶಾಖಾ ಮುಖ್ಯ ಸ್ಥರಿಗೆ ಮನವಿ ಸಲ್ಲಿಸಲಾಯಿತು.