ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಕಟ್ಟೆಮಳಲವಾಡಿ ಗ್ರಾಮಕ್ಕೆ ಮತ್ತೊಂದು ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಬೆಳಕು ಸೇವಾ ಸಂಸ್ಥೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು.ಗ್ರಾಪಂ ಕಚೇರಿ ಮುಂಭಾಗ ಗ್ರಾಮಸ್ಥರು ಪ್ರತಿಭಟಿಸಿ ಬೇಡವೇ ಬೇಡ ಮದ್ಯದಂಗಡಿ ಬೇಡ, ಬಡಕುಟುಂಬಗಳನ್ನು ಬದುಕಲು ಬಿಡಿ, ಬೀದಿ ಪಾಲಾಗಿಸಬೇಡಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಬೆಳಕು ಸೇವಾ ಸಂಸ್ಥೆಯ ಮುಖ್ಯಸ್ಥ ನಿಂಗರಾಜ್ ಮಲ್ಲಾಡಿ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಇದ್ದು. ಸುಮಾರು 30ಕ್ಕೂ ಹೆಚ್ಚು ಮನೆಗಳಲ್ಲಿ ಬೆಳಗಿನಿಂದಲೇ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದರು.ಗ್ರಾಮದಲ್ಲಿ ಕುಡಿತದಿಂದ ಅವಘಡಗಳು ನಡೆಯುತ್ತಿದ್ದರೂ ಪೊಲೀಸ್ ಅಧಿಕಾರಿಗಳಾಗಲೀ, ಅಬಕಾರಿ ಅಧಿಕಾರಿಗಳಾಗಲೀ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕಂಡರೂ ಕಾಣದಂತೆ ನಿರ್ಲಕ್ಷಿಸುತ್ತಿದ್ದಾರೆ. ಗ್ರಾಮದಲ್ಲಿ ಕೆಲವು ದುಷ್ಟ ವ್ಯಕ್ತಿಗಳು ಮತ್ತೊಂದು ಹೊಸ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆ ಮಾಡಲು ಕಟ್ಟೆಮಳಲವಾಡಿ ಗ್ರಾಪಂನಲ್ಲಿ ನಿರಾಕ್ಷೇಪಣಾ (ಎನ್ ಒ.ಸಿ) ಪತ್ರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.
ಗ್ರಾಪಂ ಎಲ್ಲ ಸದಸ್ಯರು, ಅಧ್ಯಕ್ಷರು, ಹೊಸ ಬಾರ್ ಸ್ಥಾಪನೆ ಮಾಡಲು ಪಂಚಾಯ್ತಿ ವತಿಯಿಂದ ಎನ್.ಒ.ಸಿ ಕೊಡುವುದನ್ನು ನಿಲ್ಲಿಸಬೇಕು. ಗ್ರಾಮದ ಬಡಜನರಿಗೆ ಮದ್ಯದಿಂದ ಆಗುತ್ತಿರುವ ತೀವ್ರ ತೊಂದರೆಗಳನ್ನು ಮನಗಂಡು ಗ್ರಾಮದ ಬಡಜನರ ಕುಟುಂಬಗಳು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡಲು ಆದ್ಯತೆ ಕೊಡಬೇಕು. ಯಾವುದೇ ಒತ್ತಡಕ್ಕೆ ಮಣಿದು ಎನ್. ಒ.ಸಿ ಯನ್ನು ಕೊಡಬಾರದು. ಹಾಗೇನಾದರೂ ಕೊಟ್ಟರೆ ಗ್ರಾಮಸ್ಥರೊಡಗೂಡಿ ಗ್ರಾಪಂ ಕಚೇರಿ ಎದರೇ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಮನವಿ ಸ್ವೀಕರಿಸಿ ಮಾತನಾಡಿ, ಗ್ರಾಮದಲ್ಲಿ ಹೊಸ ಬಾರ್ ತೆರೆಯಲು ಪರವಾನಗಿ ಕೋರಿ ಅರ್ಜಿ ಬಂದಿರುವುದು ನಿಜ. ನಾವು ಎನ್.ಒ.ಸಿ ಕೊಟ್ಟಿಲ್ಲ. ನಿಮ್ಮ ಮನವಿಗಳನ್ನು ಮುಂದಿನ ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ಇಟ್ಟು ಪಂಚಾಯ್ತಿ ಸದಸ್ಯರಿಗೆ ಮನವರಿಕೆ ಮಾಡಿ ಯಾವುದೇ ಎನ್. ಓ ಸಿ ಯನ್ನು ಕೊಡದಂತೆ ಗ್ರಾಮದ ಬಡ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸಲಾಗುವುದು ಎಂದರು.
ದೇವೇಂದ್ರ ಕಟ್ಟೆಮಳಲವಾಡಿ, ಅಂಬೇಡ್ಕರ್ ಯುವಕ ಸಂಘದ ಅರುಣ, ಕಿರಣ, ಜೆ. ಮಹದೇವ, ಚಂದ್ರ ನವೀನ, ರವಿ, ಚಂದ್ರ, ನಟರಾಜ, ರಾಜ, ಗಿರೀಶ, ಬಾಬು ಜಗಜೀವನ್ ರಾಮ್ ಸಂಘದ ಗೌತಮ್, ಗೋಪಿ ಸಿಡಿಯಮ್ಮ ಮಹಿಳಾ ಸಂಘದ ಸದಸ್ಯೆಯರಾದ ಕಾಳಮ್ಮ, ಜಯಮ್ಮ, ಪ್ರಭಾ, ಶಾರದಮ್ಮ, ಸಣ್ಣಮ್ಮ, ಸಣ್ಣತಾಯಮ್ಮ, ತಾಯಕ್ಕ ರಫೀಕ್, ಗ್ರಾಪಂ ಸದಸ್ಯೆ ಖುತೇಜಾ ಬೀ ಇದ್ದರು.