ಸಾರಾಂಶ
ಹಳ್ಳಿಮೈಸೂರಿನ ಉದ್ದೂರು ಗ್ರಾಮದಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಹಳ್ಳಿಮೈಸೂರು ಹೋಬಳಿಯ ಉದ್ದೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಎರಚಿ ಅಪಮಾನ ಮಾಡಿರುವ ಹಿನ್ನೆಲೆ ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ನೆಮ್ಮದಿ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವವರ ನಡುವೆ ಅಶಾಂತಿ ಉಂಟು ಮಾಡುವ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸುವ ಜತೆಗೆ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವ ತನಕ ಭಾವಚಿತ್ರಕ್ಕೆ ಅಂಟಿರುವ ಸಗಣಿಯನ್ನು ತೊಳೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಗ್ರಾಮದ ಹಿರಿಯರು ಹಾಗೂ ಮುಖಂಡರ ಜತೆ ಚರ್ಚೆ ನಡೆಸಿ, ಕೃತ್ಯ ಎಸಗಿದ ಕಿಡಿಗೇಡಿಗಳ ಪತ್ತೆ ಮಾಡಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಸಗಣಿ ಅಂಟಿರುವ ಭಾವಚಿತ್ರವನ್ನು ತೊಳೆದು, ಶುಭ್ರಗೊಳಿಸಿ ಗೌರವ ಸೂಚಿಸೋಣ ಎಂದು ಗ್ರಾಮಸ್ಥರ ಮನವೊಲಿಸಿ ಭಾವಚಿತ್ರ ತೊಳೆಸುವಲ್ಲಿ ಯಶಸ್ವಿಯಾದರು.
ಈ ಸಂಬಂಧ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದರು.ಬಿಎಸ್‌ಪಿ ಜಿಲ್ಲಾಧ್ಯಕ್ಷ ಅತ್ನಿ ಹರೀಶ್, ತಾಲೂಕು ಅಧ್ಯಕ್ಷ ತಾರೇಶ್, ಗ್ರಾಮದ ಮುಖಂಡರಾದ ದೇವರಾಜು, ಯಶವಂತ್, ಶಿವಪ್ರಸಾದ್, ಮೂರ್ತಿ ಕೆ.ಉದ್ದೂರು, ನಯನ, ಕುಮಾರ್, ಗ್ರಾಪಂ ಮಾಜಿ ಸದಸ್ಯ ಸಂಗಪ್ಪ, ಗುರು, ನವೀನ್, ದಿವಾಕರ್, ಅರುಣ್, ರಾಜಮಣಿ, ಸರಸ್ಪತಿ, ಪ್ರಕಾಶ್ ಪ್ರತಿಭಟನೆಯಲ್ಲಿ ಇದ್ದರು.
ಹೊಳೆನರಸೀಪುರ ತಾಲೂಕಿನ ಉದ್ದೂರು ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಎರಚಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.