ಚೌಡ್ಲಾಪುರ ಕೆರೆ ಜಾಗ ಒತ್ತುವರಿ ತೆರವುಗೊಳಿಸಲು ಗ್ರಾಮಸ್ಥರಿಂದ ಪ್ರತಿಭಟನೆ

| Published : Jan 17 2025, 12:45 AM IST

ಸಾರಾಂಶ

ಕಡೂರು, ತಾಲೂಕಿನ ಚೌಡ್ಲಾಪುರ ಸಮೀಪದ ಕೆರೆ ಜಾಗವನ್ನು ಬೀರೂರು ಕಂದಾಯಾಧಿಕಾರಿ ಒಬ್ಬರು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ಚೌಡ್ಲಾಪುರ ಗ್ರಾಮದ ನೂರಾರು ಗ್ರಾಮಸ್ಥರು ಕೆರೆ ಕೋಡಿಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

- ತಹಸೀಲ್ದಾರ್ ಸ್ಥಳಕ್ಕೆ ಭೇಟಿ । ಬೀರೂರಿನ ಕಂದಾಯ ನಿರೀಕ್ಷಕರಿಂದ ಒತ್ತುವರಿ: ಆರೋಪಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಚೌಡ್ಲಾಪುರ ಸಮೀಪದ ಕೆರೆ ಜಾಗವನ್ನು ಬೀರೂರು ಕಂದಾಯಾಧಿಕಾರಿ ಒಬ್ಬರು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ಚೌಡ್ಲಾಪುರ ಗ್ರಾಮದ ನೂರಾರು ಗ್ರಾಮಸ್ಥರು ಕೆರೆ ಕೋಡಿಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಗುರುವಾರ ಚೌಡ್ಲಾಪುರದ ಕೆರೆ ಮುಂದೆ ಗ್ರಾಮಸ್ಥರು, ರೈತರು ಬ್ಲೂ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರಶ್ರೀನಿವಾಸ್ ನೇತೃತ್ವದಲ್ಲಿ ಒತ್ತುವರಿ ತೆರವಿಗೆಗಾಗಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಪ್ರಭಾರ ತಹಸೀಲ್ದಾರ್ ಮಂಜುನಾಥ್ ಭೇಟಿ ನೀಡಿ ಗ್ರಾಮದ ಜನರು ನೀಡಿದ ಮನವಿ ಸ್ವೀಕರಿಸಿದರು. ಆನಂತರ ಜನರ ಪರವಾಗಿ ಶೂದ್ರ ಶ್ರೀನಿವಾಸ್, ದೇವರಾಜ್, ಶಿವಣ್ಣ ಸಿ.ಎಚ್ ಮತ್ತಿತರರು ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿ ಮಾತನಾಡಿದರು. ಗ್ರಾಮದ ಸರ್ವೆ ನಂ,55 ರಲ್ಲಿ 85-26 ಗುಂಟೆಯಲ್ಲಿ ಜಲಾನಯನ ಪ್ರದೇಶವಿದ್ದು ಇದರಲ್ಲಿ ಕೆರೆ ಮತ್ತು ಏರಿ ಸೇರಿರುತ್ತದೆ. ಏರಿ ಪಕ್ಕದಲ್ಲಿ ಬೀರೂರಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ್ ಪತ್ನಿಯ ಹೆಸರಿನಲ್ಲಿ ಜಮೀನು ಖರೀದಿಸಿದ್ದಾರೆ. ಇದರ ಜೊತೆಗೆ ಹೆಚ್ಚುವರಿಯಾಗಿ ಕೆರೆಯ ಸುಮಾರು 30 ಮೀ. ಜಾಗವನ್ನು ರಾತ್ರಿ ಸಮಯದಲ್ಲಿ ಏರಿಯನ್ನು ಧ್ವಂಸ ಮಾಡಿ ಅತಿಕ್ರಮ ಮಾಡಿಕೊಂಡಿದ್ದಾರೆ ಎಂದು ದೂರಿದರು,ಇದನ್ನು ತಡೆಯಲು ಹೋದ ಗ್ರಾಮಸ್ಥರಿಗೆ ತಾನು ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಗ್ರಾಮಸ್ಥರು ಕೂಡಲೇ ಈ ಜಾಗವನ್ನು ಸರ್ವೇ ಮಾಡಿಸಿ ಅತಿಕ್ರಮಣವಾಗಿರುವ ಜಾಗವನ್ನು ತೆರವು ಗೊಳಿಸಬೇಕೆಂದು ಮನವಿ ಮಾಡಿದರು.

ಒಂದು ವೇಳೆ ತೆರವು ಪ್ರಕ್ರಿಯೆ ನಡೆಯದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆಯೂ ನ್ಯಾಯಯುತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಗ್ರಾಮದ ಮುಖಂಡರಾದ ಸಿ.ಎಚ್.ದೇವರಾಜ್, ಸಿ.ಎಚ್.ಶಿವಣ್ಣ, ಮಾಜಿ ಅಧ್ಯಕ್ಷ ನಂಜುಂಡಪ್ಪ, ಗಂಗಾಧರಪ್ಪ, ಗೌಡ್ರು ಚಂದ್ರಪ್ಪ, ಶೇಖರಪ್ಪ, ದೊರೆಸ್ವಾಮಿ, ಶಿವಕುಮಾರ್, ಆನಂದಪ್ಪ, ಮಲ್ಲೇಶ್ವರದ ತಿಮ್ಮಪ್ಪ, ಕೊಲ್ಕಾರ್ ಕುಮಾರಪ್ಪ ಸೇರಿದಂತೆ ಚೌಡ್ಲಾಪುರ, ಬಂಟುಗನಹಳ್ಳಿ, ಸಿದ್ಧರಹಳ್ಳಿ, ಕೋಡಿಹಳ್ಳಿ, ಕಲ್ಲಾಪುರ, ಚಿಕ್ಕಬಾಸೂರು, ಬಿಳುವಾಲ ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು.

-- ಬಾಕ್ಸ್-- ಒತ್ತುವರಿಯಾಗಿದ್ದರೆ ಕೂಡಲೆ ತೆರವು: ಭರವಸೆ ಗ್ರಾಮಸ್ಥರು ನೀಡಿರುವ ಮನವಿಯನ್ನು ಸ್ವೀಕರಿಸಿದ್ದು ಕಸಬಾ ಹೋಬಳಿ ಕಂದಾಯಾಧಿಕಾರಿ, ಗ್ರಾಮ ಲೆಕ್ಕಿಗರು ಮತ್ತು ಸಂಭಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಾಳೆಯೇ ಸರ್ವೇ ಕಾರ್ಯ ಮಾಡಲು ತಿಳಿಸಲಾಗಿದೆ. ಒತ್ತುವರಿಯಾಗಿದ್ದರೆ ಕೂಡಲೆ ತೆರವುಗೊಳಿಸಿ ಕೊಡುವುದಾಗಿ ಪ್ರಭಾರ ತಹಸೀಲ್ದಾರ್ ಮಂಜುನಾಥ್‌ ಭರವಸೆ ನೀಡಿದರು. ಆನಂತರ ಪ್ರತಿಭಟನಾ ನಿರತ ಗ್ರಾಮಸ್ಥರು ಸ್ಥಳದಿಂದ ತೆರಳಿದರು. 16ಕೆಕೆಡಿಯು1.ಕಡೂರು ತಾಲೂಕು ಚೌಡ್ಲಾಪುರ ಗ್ರಾಮದ ಕೆರೆಯ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ತಹಸೀಲ್ದಾರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.