ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಆದಿವಾಲ ಗ್ರಾಮ ಪಂಚಾಯಿತಿಯ ಮೀಟಿಂಗ್ ಹಾಲ್ ನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಕುಳಿತು ಸಾರ್ವಜನಿಕರ ಕೆಲಸ ಮಾಡಿಕೊಡುವಂತಹ ಪರಿಸ್ಥಿತಿ ಬಹಳ ವರ್ಷದಿಂದಲೂ ಇದೆ. ಎದುರಿಗೆ ಇರುವ ಆದಿವಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆಂದೇ ನಿರ್ಮಾಣವಾದ ಕಚೇರಿ ಇದ್ದರೂ ಸಹ ಅದು ಆರೋಗ್ಯ ಕೇಂದ್ರದವರ ಸುಪರ್ಧಿಯಲ್ಲಿದೆ.812 ನೇ ಖಾತೆ ನಂಬರಿನಲ್ಲಿ 2002 ರಲ್ಲಿ ಎಎನ್ಎಂ ಕೊಠಡಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿ ನಿರ್ಮಾಣವಾಗಿದ್ದರೂ ಸಹ ಇಲ್ಲಿಯವರೆಗೆ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಯನ್ನು ಗ್ರಾಮ ಲೆಕ್ಕಿಗರಿಗೆ ನೀಡಿಲ್ಲ. ಆಸ್ಪತ್ರೆ ಸಿಬ್ಬಂದಿಗಳು ಸಹ ಆ ಕೊಠಡಿಯನ್ನು ಉಪಯೋಗಿಸದೆ ಧೂಳು ತುಂಬಿದೆ. ಈಗಾಗಲೇ ಹಲವಾರು ಬಾರಿ ಗ್ರಾಮ ಪಂಚಾಯಿತಿ, ಗ್ರಾಮ ಲೆಕ್ಕಿಗರ ವತಿಯಿಂದ ಮನವಿ ಮಾಡಿದ್ದರೂ ಸಹ ಗ್ರಾಮ ಲೆಕ್ಕಿಗರ ಕೊಠಡಿ ಉಪಯೋಗಕ್ಕೆ ಒದಗಿಸಿಲ್ಲ.
2002 ನೇ ಇಸವಿಯಲ್ಲಿ ನಿರ್ಮಾಣವಾದ ಕೊಠಡಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಯನ್ನು 2017 - 18 ರಲ್ಲಿ ಆರೋಗ್ಯ ಕೇಂದ್ರದವರೇ ರಿಪೇರಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದರಿ ವಸತಿ ಗೃಹವನ್ನು ಕಂದಾಯ ಇಲಾಖೆಯವರ ಸುಪರ್ಧಿಗೆ ನೀಡಿ ಎಂದು ಮನವಿಗಳ ಮೇಲೆ ಮನವಿ ನೀಡಿದ್ದೇ ಬಂತು. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ವಸತಿ ಗೃಹವಿದ್ದರೂ ಸಹ ಅದು ಪ್ರಾಥಮಿಕ ಆರೋಗ್ಯ ಕೇಂದ್ರದವರ ವ್ಯಾಪ್ತಿಯಲ್ಲಿರುವುದರಿಂದ ಗ್ರಾಮ ಲೆಕ್ಕಿಗರು ಗ್ರಾಮ ಪಂಚಾಯಿತಿಯವರು ಕೊಟ್ಟ ಒಂದು ಹಳೆಯ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಈಗ ಆ ಮಳಿಗೆಯ ಸಿಮೆಂಟ್ ಸಹ ಉದುರಿ ಬೀಳುತ್ತಿರುವುದರಿಂದ ಗ್ರಾಮ ಲೆಕ್ಕಿಗರು ಪಂಚಾಯಿತಿಯ ಸಭಾಂಗಣದಲ್ಲಿಯೇ ಕುಳಿತು ಕಾರ್ಯ ನಿರ್ವಹಿಸುವಂತಾಗಿದೆ. ಗ್ರಾಮ ಪಂಚಾಯಿತಿಯ ಸಭೆಗಳಿದ್ದಾಗ ಗ್ರಾಮ ಲೆಕ್ಕಿಗರಿಗೆ ಕೆಲಸ ನಿರ್ವಹಿಸಲು ಸ್ಥಳವೇ ಇಲ್ಲವಾಗುತ್ತದೆ. ಹಾಗಾಗಿ ಸದರಿ ವಸತಿ ಗೃಹವನ್ನು ಕಂದಾಯ ಇಲಾಖೆಗೆ ಬಿಡಿಸಿಕೊಟ್ಟು ಗ್ರಾಮ ಲೆಕ್ಕಿಗರಿಗೆ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮ ಲೆಕ್ಕಿಗ ಲಕ್ಷ್ಮೀಪತಿ ಮಾತನಾಡಿ. ನಾನು ಇಲ್ಲಿಗೆ ಬಂದು ಐದು ವರ್ಷವಾಗುತ್ತಾ ಬಂತು. ಇಲ್ಲಿಯವರೆಗೆ ಗ್ರಾಮ ಪಂಚಾಯಿತಿಯವರು ಕೊಟ್ಟ ಮಳಿಗೆಯಲ್ಲೇ ಕೆಲಸ ಮಾಡಿದ್ದೇನೆ. ಈಗ ಅದು ಸಹ ಮೇಲ್ಪದರದ ಸಿಮೆಂಟ್ ಉದುರಿ ಬೀಳುತ್ತಿದ್ದು ಅಲ್ಲಿ ಸಾರ್ವಜನಿಕರನ್ನು ಕೂರಿಸಿಕೊಂಡು ಕೆಲಸ ಮಾಡಲಾಗುವುದಿಲ್ಲ. ಈಗ ಪಂಚಾಯಿತಿಯ ಕಚೇರಿಯಲ್ಲೇ ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾಗಿದೆ. ಜನ ಬರುತ್ತಿರುತ್ತಾರೆ. ಪಂಚಾಯಿತಿ ಸಿಬ್ಬಂದಿಗಳಿಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿ ಬಿಡಿಸಿ ಕೊಟ್ಟರೆ ಅನುಕೂಲವಾಗುತ್ತದೆ ಎಂದರು.ಟಿಎಚ್ ಓ. ಡಾ. ವೆಂಕಟೇಶ್ ಪ್ರತಿಕ್ರಿಯಿಸಿ, ಹೈವೆ ನಿರ್ಮಾಣವಾದಾಗ ಕಟ್ಟಿದ ಕೊಠಡಿಗಳನ್ನು ನಮ್ಮ ಸುಪರ್ದಿಗೆ ನೀಡಿದ್ದರು. ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೊಠಡಿ ಇರುವುದರಿಂದ ನಾವೇ ಬಳಸುತ್ತಿದ್ದೇವೆ. ಗ್ರಾಮ ಲೆಕ್ಕಿಗರ ವಸತಿಗೃಹ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಅದು ಯಾರಿಗೇ ಸೇರಿದರು ಸಹ ಸರ್ಕಾರದ ಕೆಲಸವೇ ನಡೆಯುವುದರಿಂದ ಸಂಬಂಧಪಟ್ಟ ದಾಖಲಾತಿ ಪರಿಶೀಲಿಸಿ ಮುಂದಿನ ನಿರ್ಧಾರ ಮೇಲಾಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದರು.