ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಸಿಂಗೆಹಳ್ಳಿ ಸಮೀಪದ ಗುಟ್ಟಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕುರಿಗಾಹಿಗಳು, ಜನತೆ ಆತಂಕದಿಂದ ಈ ಭಾಗದಲ್ಲಿ ಓಡಾಡುವಂತಾಗಿದೆ. ಯಾವುದೇ ಅನಾಹುತವಾಗುವ ಮುನ್ನಾ ಚಿರತೆ ಹಿಡಿಯಲು ಕ್ರಮವಹಿಸಲು ಅರಣ್ಯ ಇಲಾಖೆಗೆ ಗ್ರಾಮದ ಮುಖಂಡ ತಿರುಮಲೇಶ್ ಮತ್ತಿತರ ಗ್ರಾಮಸ್ಥರು ಮನವಿ ಮಾಡಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ತಿರುಮಲೇಶ್, ಮೊದಲು ಚಿರತೆ ಇದೆ ಎಂಬ ವದಂತಿಗಳು ಹರಡಿತ್ತು. ಆದರೆ ಸಂಜೆ ವೇಳೆಗೆ ಪಟಾಕಿ ಸಿಡಿಸಿದ್ದರಿಂದಾಗಿ ಚಿರತೆ ಹೊರ ಬಂದು ಗುಟ್ಟದ ಮೇಲೆ ಪ್ರತ್ಯಕ್ಷವಾಯಿತು ಎಂದು ತಿಳಿಸಿದ್ದಾರೆ.ಚಿರತೆ ಆಹಾರಕ್ಕಾಗಿ ಗ್ರಾಮಕ್ಕೆ ನುಗ್ಗಿ ಕುರಿ, ರಾಸುಗಳ ಮೇಲೆ ಧಾಳಿ ಮಾಡುವ ಆತಂಕ ಇರುವುದರಿಂದ ಜಿಲ್ಲಾಡಳಿತ ಬೋನು ಇಟ್ಟಾದರೂ ಚಿರತೆ ಸೆರೆ ಹಿಡಿಯುವ ಮೂಲಕ ಈ ಭಾಗದ ಜನರಲ್ಲಿ ಕಾಡುತ್ತಿರುವ ಆತಂಕ ದೂರ ಮಾಡುವಂತೆ ಅವರು ಮನವಿ ಮಾಡಿದ್ದಾರೆ.